(ಉತ್ತರ ಕನ್ನಡ): ನಾನಾಗಿ ಬಿಜೆಪಿಯನ್ನು ಬಿಟ್ಟಿಲ್ಲ, ನಮ್ಮನ್ನು ಮನೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಇದು ಭಾರತೀಯ ಜನತಾ ಪಾರ್ಟಿಯ ಶಾಸಕ ಸ್ಥಾನ ಮತ್ತು ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಜಗದೀಶ್ ಶೆಟ್ಟರ್ ಕೊಟ್ಟ ಪ್ರತಿಕ್ರಿಯೆ.
ಈಗ ಹುಬ್ಬಳ್ಳಿಗೆ ಹೋಗಿ ನನ್ನ ಬೆಂಬಲಿಗರು, ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಮೂಲ ಬಿಜೆಪಿಗರನ್ನು ಪಕ್ಷದಿಂದ ಹೊರಹಾಕುವ ಮೂಲೆಗುಂಪು ಮಾಡುವ ಕೆಲಸ ನಡೆಯುತ್ತಿದೆ. ನನಗೆ ಬಿಜೆಪಿ ಪಕ್ಷದ ಮೇಲೆ ಸಿಟ್ಟಿಲ್ಲ, ಬೇಸರವಿಲ್ಲ, ಆದರೆ ಕೆಲವರಿಂದಾಗಿ ಪಕ್ಷ ಹಾಳಾಗುತ್ತಿದೆ, ಕೆಲವರ ಷಡ್ಯಂತ್ರದಿಂದ ನಾಯಕರುಗಳಿಗೆ ತೊಂದರೆಯಾಗುತ್ತಿದೆ ಎಂದರು.
ನಾನು ಈವರೆಗೆ ಯಾವುದೇ ನಾಯಕರ ಜೊತೆ ಚರ್ಚಿಸಿಲ್ಲ, ನಾಯಕರ ಜೊತೆ ಚರ್ಚೆ ಮಾಡಿ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ.
ನನಗೇಕೆ ಟಿಕೆಟ್ ನೀಡಿಲ್ಲ: ಕಳೆದ ಬಾರಿ ಬೊಮ್ಮಾಯಿಯವರು ಮುಖ್ಯಮಂತ್ರಿಯಾದಾಗ ಹೊಸ ಸಚಿವ ಸಂಪುಟದಲ್ಲಿ ನನಗೆ ಮಂತ್ರಿ ಸ್ಥಾನ ಬೇಡವೆಂದು 2 ವರ್ಷ ಶಾಸಕನಾಗಿ ಕ್ಷೇತ್ರದಲ್ಲಿ ಅತ್ಯಂತ ಶಾಂತವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ನನ್ನ ಮೇಲೆ ಯಾವುದೇ ಕೇಸುಗಳಿಲ್ಲ, ನಾನು ರೌಡಿ ಶೀಟರ್ ಅಲ್ಲ, ನನ್ನ ವಿರುದ್ಧ ಯಾವುದೇ ಸಿಡಿ ಹಗರಣ ಕೇಸುಗಳೂ ಕೂಡ ಇಲ್ಲ, ನನಗೆ 75 ವರ್ಷ ವಯಸ್ಸೂ ಆಗಿಲ್ಲ, ಹಾಗಿದ್ದರೂ ನನಗೆ ಆ ಬಾರಿ ಟಿಕೆಟ್ ಏಕೆ ನಿರಾಕರಿಸಿದರು ಎಂಬುದು ಅಚ್ಚರಿಯಾಗುತ್ತದೆ ಎಂದರು.
ನನಗೆ ಯಾವುದೇ ದೊಡ್ಡ ಆಕಾಂಕ್ಷೆಗಳಿಲ್ಲ, ಸಿಎಂ ಹುದ್ದೆ ಅಥವಾ ಕೇಂದ್ರ ಸರ್ಕಾರದಲ್ಲಿ, ಪಕ್ಷದ ಕೇಂದ್ರ ಮಟ್ಟದಲ್ಲಿ ಹುದ್ದೆ ಬೇಕೆಂದು ನಾನು ಕೇಳಲಿಲ್ಲ, ನಾನು ಬಿಜೆಪಿಯಲ್ಲಿ ಕೇಳಿದ್ದು ಕೇವಲ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಟಿಕೆಟ್. ಅದನ್ನು ನಿರಾಕರಿಸಿದ್ದು ಮನಸ್ಸಿಗೆ ನೋವಾಗಿದೆ. ಅನಂತ್ ಕುಮಾರ್, ಬಿಎಸ್ ವೈ ಜೊತೆಗೆ ಸೇರಿ ನಾನು ಕೂಡ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಕೆಲಸ ಮಾಡಿದ್ದೆ. ಈ ಬಾರಿ ಟಿಕೆಟ್ ಇಲ್ಲವೆಂದಾಗ ಬಿಎಸ್ ವೈಯವರು ನಿಮಗೆ ಹೀಗಾಗಬಾರದಿತ್ತು ಎಂದರು. ಇಂದು ಮಾಧ್ಯಮಗಳ ಮುಂದೆ ಬೇರೆ ರೀತಿ ಮಾತನಾಡುತ್ತಿದ್ದಾರೆ. ಬಹುಶಃ ಕೇಂದ್ರದ ವರಿಷ್ಠರ ಸೂಚನೆ ಮೇರೆಗೆ ಮಾತನಾಡುತ್ತಿರಬಹುದು ಎಂದು ಜಗದೀಶ್ ಶೆಟ್ಟರ್ ಹೇಳಿದರು.