ಬೆಂಗಳೂರು: ಶೋಭಾ ಕರಂದ್ಲಾಜೆ ಸಿಎಂ ಆಗ್ತಾರೆ? ರಾಜ್ಯ ರಾಜಕೀಯಕ್ಕೆ ಮರಳುತ್ತಾರೆ ಎಂಬ ಚರ್ಚೆಗೆ ಸ್ವತಃ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಫುಲ್ ಸ್ಟಾಪ್ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯ ರಾಜಕೀಯಕ್ಕೆ ಮರಳೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೋಭಾ ಕರಂದ್ಲಾಜೆ ರಾಜ್ಯ ರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜ್ಯ ರಾಜಕೀಯಕ್ಕೆ ವಾಪಸ್ ಬರೋದಿಲ್ಲ. ನರೇಂದ್ರ ಮೋದಿ ಅವರು ನನಗೆ ಕೃಷಿ ಇಲಾಖೆ ಜವಾಬ್ದಾರಿ ಕೊಟ್ಟಿದ್ದಾರೆ. ಅನೇಕ ರಾಜ್ಯಗಳಲ್ಲಿ ಚುನಾವಣೆ ಉಸ್ತುವಾರಿಯನ್ನು ನನಗೆ ಕೊಟ್ಟಿದ್ದಾರೆ. ನಾನು ಇದ್ರಲ್ಲಿ ಖುಷಿಯಾಗಿ ಇದ್ದೇನೆ ಎಂದರು.
ನಾನು ರಾಜ್ಯಕ್ಕೆ ವಾಪಸ್ ಬರುತ್ತೇನೆ ಅನ್ನೋ ಚರ್ಚೆಯೇ ಆಗಿಲ್ಲ. ಇದು ಆಧಾರವಿಲ್ಲದ ಚರ್ಚೆ ಅಂದರು. ಈ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಪಕ್ಷ ನನಗೆ ಜವಾಬ್ದಾರಿ ಕೊಟ್ಟಿದೆ. ಅದನ್ನ ನಿಭಾಯಿಸಿಕೊಂಡು ಹೋಗುತ್ತೇನೆ. ರಾಜ್ಯಕ್ಕೆ ಮತ್ತೆ ವಾಪಸ್ ಆಗೋದಿಲ್ಲ ಎಂದು ತಿಳಿಸಿದರು.