ಹುಬ್ಬಳ್ಳಿ: ಕಂದಾಯ ಗ್ರಾಮ, ಅರಣ್ಯ ಇಲಾಖೆಯ ಕಾನೂನು ತಿದ್ದುಪಡಿ ಮಾಡಿದ್ದು ನಾವು. ತಾಂಡಾ, ಹಟ್ಟಿ, ದೊಡ್ಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ನಾವು. ಈಗ ಚುನಾವಣೆ ಇರುವ ಹಿನ್ನೆಲೆ ಬಿಜೆಪಿಯವರು ಪ್ರಧಾನಿ ಮೋದಿಯವರನ್ನು ಕರೆಯಿಸಿ ನಾವೇ ಮಾಡಿದವರೆಂದು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿಸಲು ಕಾನೂನು ಮಾಡಿದ್ದೆ. ಅಡುಗೆ ಮಾಡಿದವರು ನಾವು, ಊಟ ಮಾಡುವವರು ಬಿಜೆಪಿಯವರು. ಸೇವಾಲಾಲ ಜಯಂತಿ, ಲಂಬಾಣಿ ಅಭಿವೃದ್ಧಿ ನಿಗಮ ಆರಂಭಿಸಿದ್ದು ನಾವು. ಸೇವಾಲಾಲ ಹುಟ್ಟಿದ ಸ್ಥಳ ಅಭಿವೃದ್ಧಿಪಡಿಸಿದ್ದೇವೆ. 450 ಕೋಟಿ ರೂ. ಅನುದಾನ ನೀಡಿದ್ದೇವೆ. ಲಂಬಾಣಿ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಕೇವಲ ಮೂರು ವರ್ಷದಲ್ಲಿ ಕೇವಲ 70 ಕೋಟಿ ರೂ. ಕೊಟ್ಟಿದ್ದಾರೆ. ಹಕ್ಕು ಪತ್ರ ನಾವು ಸಿದ್ಧಪಡಿಸಿದ್ದೇವೆ. ಈಗ ಅವರು ವಿತರಣೆ ಮಾಡುತ್ತಿದ್ದಾರೆ ಎಂದರು.
ನಮ್ಮ ಸರ್ಕಾರದಲ್ಲಿ 30 ಸಾವಿರ ಕೋಟಿ ರೂ. ಎಸ್ಸಿಇಪಿಟಿ ಹಣವಿತ್ತು. ಈಗ ಅದು 42 ಸಾವಿರ ಕೋಟಿ ರೂ. ಆಗಬೇಕಿತ್ತು. ಆದರೆ 28 ಸಾವಿರ ಕೋಟಿಯಾಗಿದೆ. ಇದರ ಅರ್ಥ ಬಿಜೆಪಿ ಎಸ್ಸಿಇಸ್ಪಿಟಿ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದ್ದಾರೆ. ಬಿಜೆಪಿ ಎಂದರೆ ಸುಳ್ಳನ್ನು ಉತ್ಪಾದಿಸುವ ಫ್ಯಾಕ್ಟರಿ. ನೂರು ಬಾರಿ ಸುಳ್ಳು ಹೇಳಿ ಅದನ್ನೇ ಸತ್ಯ ಎಂದು ಬಿಂಬಿಸುತ್ತಾರೆ. ನರೇಂದ್ರ ಮೋದಿಯವರಿಂದ ಬರೀ ಸುಳ್ಳು ಹೇಳಿಸುತ್ತಿದ್ದಾರೆ ಎಂದರು.
ನನಗೆ ಮೋದಿ ಕಂಡರೆ ಭಯವಿಲ್ಲ. ಆದರೆ ನನ್ನ ಕಂಡರೆ ಅವರಿಗೆ ಭಯ. ಏಕೆಂದರೆ ನಾನು ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುತ್ತೇನೆ. ಸತ್ಯ ಹೇಳುತ್ತೇನೆ ಎನ್ನುವ ಭಯ ಅವರಿಗೆ ಎಂದರು.
ಮೋದಿ ಭಾಷಣ ಮಾಡಿದ ತಕ್ಷಣ ಬಿಜೆಪಿ ಗೆಲ್ಲುವುದಿಲ್ಲ. ಸುಳ್ಳು ಹೇಳಿದರೆ ಜನ ನಂಬುವುದಿಲ್ಲ. ಮೋದಿ ಬಂದರೆ ಜನ ಮೋಡಿ ಆಗುವುದಿಲ್ಲ. ಯಾರು ಏನೆಂಬುದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದರು.