ಮಂಗಳೂರು: ”ನಾನು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ನಾಯಿ ಮರಿ ಎಂದು ಕರೆದಿಲ್ಲ. ನಾಯಿ ಮರಿ ತರ ಇರಬಾರದು ಅಂದಿದ್ದೆ, ಅದು ಅಸಂಸದೀಯ ಪದವಲ್ಲ” ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಗುರುವಾರ ಸ್ಪಷ್ಟನೆ ನೀಡಿದ್ದಾರೆ.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಾನು ನಾಯಿ ಮರಿ ಅಂತ ನಾನು ಹೇಳಿಲ್ಲ.ಧೈರ್ಯ ಇರಬೇಕು.ರಾಜ್ಯದ ಹಿತ ಬಹಳ ಮುಖ್ಯ. ಕೇಂದ್ರ ಸರ್ಕಾರದಿಂದ ಅನುದಾನ ತರುವಲ್ಲಿ ಅವರು ಧೈರ್ಯ ತೋರಬೇಕು.ನಾಯಿ ಮರಿ ತರ ಇರಬಾರದು ಅಂತ ಹೇಳಿದ್ದೆ ಅಷ್ಟೇ. ಅದು ಅಸಂಸದೀಯ ಪದ ಅಲ್ಲ. ನನಗೆ ಟಗರು, ಹುಲಿಯ ಅಂತ ಕರೆಯುತ್ತಾರೆ. ಯಡಿಯೂರಪ್ಪ ಅವರಿಗೆ ರಾಜಾ ಹುಲಿ ಅಂತ ಅವರ ಪಕ್ಷದವರೇ ಕರೆಯುತ್ತಾರೆ. ಹಾಗಾದರೆ ಯಡಿಯೂರಪ್ಪ ಅವರು ಹುಲಿನಾ” ಎಂದು ಪ್ರಶ್ನಿಸಿದರು.
“15 ನೇ ಹಣಕಾಸು ಆಯೋಗ ದಲ್ಲಿ ರಾಜ್ಯಕ್ಕೆ 5,495 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಶಿಫಾರಸು ಮಾಡಲಾಗಿತ್ತು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ತರುವಲ್ಲಿ ಸಿಎಂ ಧೈರ್ಯ ತೋರಲಿಲ್ಲ, ಧೈರ್ಯ ತೋರಬೇಕು ಎಂದು ಹೇಳಿದ್ದೆ. ನಾಯಿ ಅಂದರೆ ನಂಬಿಕೆ ಇರುವಂತಹ ಪ್ರಾಣಿ” ಎಂದರು.
“
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಾಲಿಷ ಹೇಳಿಕೆ ನೀಡುವ ವಿದೂಷಕ. ಅವರ ಟೀಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ನನ್ನನ್ನು ಜೈಲಿಗೆ ಹಾಕುತ್ತಾರೆ ಅಂದಿದ್ದಾರೆ. ಅವರು ಜೈಲಿಗೆ ಹಾಕುವುದಲ್ಲ. ಕೋರ್ಟ್ ಗಳು ಜೈಲಿಗೆ ಕಳುಹಿಸುವುದು. ವಿಚಾರಣೆ ಮಾಡಿ ತಪ್ಪಿತಸ್ಥ ಅಂದಾದರೆ ಜೈಲಿಗೆ ಕಳುಹಿಸುತ್ತಾರೆ. ನಳಿನ್ ಕುಮಾರ್ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ.ಕಾನೂನು ಗೊತ್ತಿಲ್ಲ ಏನೂ ಗೊತ್ತಿಲ್ಲ” ಎಂದರು.
”ನಾನು ಈ ಹಿಂದೆ ಮೂರು ನಾಲ್ಕು ಸರಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದ್ದೆ” ಎಂದು ಈ ವೇಳೆ ಹೇಳಿದರು.