ವಿಜಯಪುರ: ಎಲ್ಲವನ್ನು ಬಿಡಿಸಿ ಹೇಳುವುದಿಲ್ಲ. ಬಿಜ್ಜರಗಿ ಗ್ರಾಮಸ್ಥರು ತಮ್ಮ ಎಲ್ಲ ಬಂಧುಗಳು, ಸ್ನೇಹಿತರು ಮತ್ತು ತಮಗೆ ಪರಿಚಯವಿರುವ ಎಲ್ಲರನ್ನೂ ಸಂಪರ್ಕಿಸಿ ಎಂ. ಬಿ. ಪಾಟೀಲರನ್ನು ಈ ಬಾರಿ 50 ಸಾವಿರಕ್ಕೂ ಹೆಚ್ಚು ಅಂತರದಿಂದ ಆಯ್ಕೆ ಮಾಡಿ, ಉತ್ತರ ಕರ್ನಾಟಕದಲ್ಲಿ ಮತ್ತೊಂದು ಹೊಸ ಇತಿಹಾಸ ನಿರ್ಮಿಸಬೇಕು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರ ಪರ ಪ್ರಚಾರ ನಡೆಸಿದ ಅವರು, ಬಿಜ್ಜರಗಿ ಗ್ರಾಮಸ್ಥರ ಮೇಲೆ ವಿಶ್ವಾಸವಿಟ್ಟು ಇಲ್ಲಿಗೆ ಬಂದಿದ್ದೇನೆ. ಲಕ್ಷ್ಮಣ ಸವದಿ ಯಾವುದೇ ಊರಿಗೆ ಹೋಗಬೇಕಾದರೆ ನೂರು ಬಾರಿ ಯೋಚಿಸಿಯೇ ಹೋಗುತ್ತಾರೆ. ಈ ಭಾಗದ ಎಲ್ಲರೂ ಎಂ. ಬಿ. ಪಾಟೀಲರನ್ನು ಅವರ ರಾಜಕೀಯ ಜೀವನದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಒಬ್ಬ ಒಳ್ಳೆಯ ನಾಯಕ ನಿಮಗೆ ಸಿಕ್ಕಿದ್ದಾರೆ. ಅಂಥ ನಾಯಕರನ್ನು ಬೆಳೆಸುವ ಕೆಲಸವನ್ನು ತಾವೆಲ್ಲರೂ ಮಾಡಬೇಕು. ಶೆ.90 ಕ್ಕೂ ಹೆಚ್ಚು ಮತಗಳನ್ನು ಅವರಿಗೆ ಹಾಕಬೇಕು. ತಾವು ಯಾವುದೇ ಟೀಕೆ ಟಿಪ್ಪಣೆಗಳಿಗೆ ಕಿವಿಗೊಡಬಾರದು. ಎಂ. ಬಿ. ಪಾಟೀಲರು 10 ವರ್ಷಗಳ ಕಾಲ ತಮ್ಮ ಮನೆ ಮಠ ಬಿಟ್ಟು ಹಗಲು ರಾತ್ರಿ ನಿಮಗೆ ನೀರು ಕೊಡಲು ಶ್ರಮಿಸಿದ್ದಾರೆ. ತಾವೆಲ್ಲರೂ ಚುನಾವಣೆ ಮುಗಿಯುವವರೆಗೆ ಎಂಟು ದಿನಗಳ ಕಾಲ ನಿಮ್ಮ ಮನೆ ಕೆಲಸಗಳನ್ನು ಬಿಟ್ಟು, ಅವರ ಗೆಲುವಿಗ ಶ್ರಮಿಸಬೇಕು. ಆಯ್ಕೆಯಾದ ಬಳಿಕ ಅವರು ತಮ್ಮ ಮನೆ ಕೆಲಸಗಳನ್ನು ಬಿಟ್ಟು ಐದು ವರ್ಷಗಳ ಕಾಲ ನಿಮ್ಮ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.
ನಾನು ಕಾಂಗ್ರೆಸ್ ಸೇರುವಲ್ಲಿ ಎಂ. ಬಿ. ಪಾಟೀಲರ ಸಿಂಹಪಾಲಿದೆ
ಬಿಜೆಪಿಯಲ್ಲಿ ಸಂಕಷ್ಟದಲ್ಲಿದ್ದ ನಾನು ಕಾಂಗ್ರೆಸ್ ಸೇರುವಲ್ಲಿ ಎಂ. ಬಿ. ಪಾಟೀಲರ ಸಿಂಹಪಾಲು ಕೆಲಸ ಮಾಡಿದ್ದಾರೆ. ಬಿಜೆಪಿ ನನ್ನನ್ನು ಹೊರದಬ್ಬುತ್ತಿದ್ದ ಕಷ್ಟ ಕಾಲದಲ್ಲಿ ನನಗೆ ಏನೂ ತೊಚದಿದ್ದಾಗ ಎಂ. ಬಿ. ಪಾಟೀಲರೇ ಮೊದಲಿಗೆ ಕರೆ ಮಾಡಿ, ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದರು. ನಾವಿಬ್ಬರೂ ಒಳ್ಳೆಯ ಕಾರ್ಯಕರ್ತರಾಗಿರುವುದರಿಂದ ಜೋಡೆತ್ತುಗಳಾಗಿ ಈ ಭಾಗದ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಹೇಳಿದ್ದರು. ಅಷ್ಟೇ ಅಲ್ಲ, ನಂತರ ನಾನು ಬೆಂಗಳೂರಿಗೆ ತೆರಳಿದಾಗ ಮಧ್ಯರಾತ್ರಿ ಎರಡು ಗಂಟೆಗೆ ಬೆಂಗಳೂರಿಗೆ ಬಂದು ಮರು ದಿನ ಬೆಳೆಗ್ಗೆ ಸುರ್ಜೆವಾಲಾ, ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯನವರ ಜೊತೆ ಸಭೆಯನ್ನು ಆಯೋಜಿಸಿ ನನ್ನನ್ನು ಅತ್ಯಂತ ಗೌರವದಿಂದ ಬರಮಾಡಿಕೊಂಡಿದ್ದಾರೆ. ಅಲ್ಲದೇ, ಕಾಂಗ್ರೆಸ್ ಟಿಕೆಟ್ ಸಿಗುವವರೆಗೂ ನಡೆದ ಚಟುವಟಿಕೆಗಳಲ್ಲಿ ಅವರು ಸಿಂಹಪಾಲು ಕೆಲಸ ಮಾಡಿದ್ದಾರೆ. ಎಂದು ಅವರು ಹೇಳಿದರು.
20 ವರ್ಷಗಳಿಂದ ಬಿಜೆಪಿಯವರು ಈ ಭಾಗದಲ್ಲಿ ನನ್ನ ಮೂಲಕ ಪಟಾಕಿ ಸಿಡಿಸಿಕೊಳ್ಳಲು ಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ನಾನೇನು ಆರ್.ಎಸ್.ಎಸ್ ನಿಂದ ಬಿಜೆಪಿಗೆ ಬಂದಿಲ್ಲ. ಜನತಾ ಪರಿವಾರದಿಂದ ಬಿಜೆಪಿಗೆ ಹೋಗಿದ್ದೆ. 20 ವರ್ಷ ಪಕ್ಷ ಕಟ್ಟಿದೆ. ಈಗ ಅದರ ಅವಧಿ ಮುಗಿದಿದೆ. ಬಿಜೆಪಿಯವರ ನಡವಳಿಕೆಯಿಂದ 37 ಜನ ಮುಖಂಡರು ಪಕ್ಷ ತೊರೆದಿದ್ದಾರೆ. ವಿನಾಶಕಾಲೆ ವಿಪರಿತ ಬುದ್ಧಿ ಎಂಬ ಗಾದೆ ಮಾತಿನಂತೆ ಬಿಜೆಪಿಯವರು ಪಕ್ಷದ ಬಾಗಿಲು ಮುಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ಬಿಜ್ಜರಗಿ ಗ್ರಾಮ ಜಗತ್ತಿಗೆ ಶ್ರೇಷ್ಠ ಸಂತರನ್ನು ನೀಡಿದೆ. ಸಿದ್ಧೇಶ್ವರ ಶ್ರೀಗಳ ಆಶಯದಂತೆ ತುಬಚಿ- ಬಬಲೇಶ್ವರ ಏತ ನೀರಾವರಿ ಮೂಲಕ ಈ ಭಾಗದಲ್ಲಿ ನೀರಾವರಿ ಮಾಡಿದ್ದೇನೆ. ಅದೇ ರೀತಿ ಲಕ್ಷ್ಮಣ ಸವದಿ ಕರಿಮಸೂತಿ ಏತ ನೀರಾವರಿ ಮೂಲಕ ಅಥಣಿ ಭಾಗದಲ್ಲಿ ನೀರಾವರಿ ಮಾಡಿದ್ದಾರೆ. ಅವರು ಅಭಿವೃದ್ಧಿ ಪರ ರಾಜಕಾರಣಿಯಾಗಿದ್ದಾರೆ. ಯಾವುದೇ ವೈಯಕ್ತಿಕ ಬೇಡಿಕೆಯನ್ನು ನೀಡದೆ ಅಥಣಿ ತಾಲೂಕಿನ ಪೂರ್ವ ಭಾಗಕ್ಕೆ ನೀರಾವರಿ ಮತ್ತು ಮತಕ್ಷೇತ್ರದ ಅಭಿವೃದ್ಧಿ ಬಯಸಿ ಕಾಂಗ್ರೆಸ್ ಸೇರಿದ್ದಾರೆ. ಬಬಲೇಶ್ವರ ಮತ್ತು ಅಥಣಿ ಎರಡು ಕ್ಷೇತ್ರಗಳನ್ನು ಜಂಟಿಯಾಗಿ ಅಭಿವೃದ್ಧಿ ಮಾಡುತ್ತೇವೆ. ಜಗದೀಶ ಶೆಟ್ಟರ ಮತ್ತು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜ್ಜರಗಿ ಗ್ರಾಮಸ್ಥರು ತಮ್ಮ ಜಮೀನುಗಳಿಗೆ ನೀರುಣಿಸಿದ ಎಂ. ಬಿ. ಪಾಟೀಲರ ಚುನಾವಣೆ ಖರ್ಚಿಗಾಗಿ ರೂ. 3.85 ಲಕ್ಷ ಹಣದ ಚೆಕ್‍ನ್ನು ದೇಣಿಗೆಯಾಗಿ ನೀಡಿದರು. ಇದನ್ನು ವಿನಯದಿಂದ ಬೇಡ ಎಂದ ಎಂ. ಬಿ. ಪಾಟೀಲರು ಈ ಹಣವನ್ನು ಗ್ರಾಮಸ್ಥರ ಸತ್ಕಾರ್ಯಗಳಿಗೆ ಬಳಸುವಂತೆ ರಾಮನಿಂಗ ಮಸಳಿ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜತ ಶಾಸಕ ವಿಕ್ರಮಸಿಂಹ ಸಾವಂತ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬಿಜ್ಜರಗಿ ಗ್ರಾಮದ ಹಿರಿಯರು, ಮಹಿಳೆಯರು ಮತ್ತು ಯುವಕರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಕಾಂಗ್ರೆಸ್ಸಿನ ಸಾವಿರಾರು ಕಾರ್ಯಕರ್ತರು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಟ್ಟಲಗಿಯಿಂದ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿವರೆಗೆ ಸುಮಾರು 15 ಕಿ.ಮೀ ಬೈಕ್ ಬೃಹತ್ ರ್ಯಾಲಿ ನಡೆಸಿ, ಎಂ. ಬಿ. ಪಾಟೀಲ ಮತ್ತು ಲಕ್ಷ್ಮಣ ಸವದಿ ಅವರನ್ನು ಕರೆತಂದಿದ್ದು ಗಮನ ಸೆಳೆಯಿತು.