ನಾವು ಇನ್ನೂ ಕುಟುಂಬ ಜೀವನ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ – ಐಪಿಎಸ್ ಅಧಿಕಾರಿ ಡಿ ರೂಪಾ

ಬೆಂಗಳೂರು: ತಾವು ಆರ್ ಟಿಐ ಕಾರ್ಯಕರ್ತ ಗಂಗರಾಜು ಜೊತೆಗೆ ಫೋನ್ ನಲ್ಲಿ ನಡೆಸಿದ್ದ ಸಂಭಾಷಣೆ ಆಡಿಯೊ ಮಾಧ್ಯಮಗಳಿಗೆ ಸಿಕ್ಕಿ ಪ್ರಸಾರವಾಗುತ್ತಿದ್ದಂತೆ ಐಪಿಎಸ್ ಅಧಿಕಾರಿ ಡಿ ರೂಪಾ ಇಂದು ಫೇಸ್ ಬುಕ್ ಪೋಸ್ಟನ್ನು ಹಾಕಿದ್ದಾರೆ. ಅದರಲ್ಲಿ ತಾವು ಹೋರಾಡುತ್ತಿರುವ ಉದ್ದೇಶವೊಂದು, ಮಾಧ್ಯಮಗಳಲ್ಲಿ ಆ ವಿಷಯ ಬಿಟ್ಟು ಬೇರೆ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿರುವ ರೂಪಾ ಭಾರತದಲ್ಲಿ ಕುಟುಂಬ ಸಂಸ್ಕೃತಿ, ಮಹಿಳೆಗಿರುವ ಸವಾಲುಗಳನ್ನು ಸೂಕ್ಷ್ಮವಾಗಿ ಬರೆದಿದ್ದಾರೆ.

ಅವರು ಇಂದು ಪೋಸ್ಟ್ ಮಾಡಿರುವ ಬರಹದ ಸಾರಾಂಶ ಹೀಗಿದೆ: ಆತ್ಮೀಯ ಮಾಧ್ಯಮ ಮಿತ್ರರೇ, ನಾನು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎತ್ತಿರುವ ಭ್ರಷ್ಟಾಚಾರದ ವಿಷಯದ ಬಗ್ಗೆ ಗಮನಹರಿಸಿ. ಜನಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರುವ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕೆ ನಾನು ಯಾರನ್ನೂ ತಡೆದಿಲ್ಲ. ಅದೇ ಸಮಯದಲ್ಲಿ, ಮಾದರಿ(PATTERN) ಎಂಬ ಇಂಗ್ಲಿಷ್ ಪದಕ್ಕೆ ಒತ್ತು ನೀಡಿ ಅಧಿಕಾರಿಗಳ ನಡುವಿನ ಸಂಬಂಧದಿಂದ ಸಂಸಾರಕ್ಕೆ ಕುತ್ತು ಬರುವ ವಿಚಾರವನ್ನು ಕೂಡ ರೂಪಾ ಇಲ್ಲಿ ಪ್ರಸ್ತಾಪಿಸಿದ್ದಾರೆ. 

ಕರ್ನಾಟಕದಲ್ಲಿ ಒಬ್ಬ ಐಎಎಸ್ ಅಧಿಕಾರಿ, ತಮಿಳುನಾಡಿನಲ್ಲಿ ಒಬ್ಬ ಐಪಿಎಸ್ ಅಧಿಕಾರಿ ತೀರಿಕೊಂಡು ಕರ್ನಾಟಕದಲ್ಲಿ ಒಬ್ಬ ಐಎಎಸ್ ಪತಿ-ಪತ್ನಿ ಅಧಿಕಾರಿಗಳು ಈಗಾಗಲೇ ವಿಚ್ಛೇದನ ಪಡೆದಿದ್ದಾರೆ.

ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಇನ್ನೂ ಕುಟುಂಬ ಜೀವನ ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಕುಟುಂಬಕ್ಕೆ ಅಡ್ಡಿಯಾಗುತ್ತಿರುವ ಮಾದರಿಯನ್ನು ಪ್ರದರ್ಶಿಸುವ ಅಪರಾಧಿಯನ್ನು ದಯವಿಟ್ಟು ಪ್ರಶ್ನಿಸಿ. ಇಲ್ಲದಿದ್ದರೆ ಇನ್ನೂ ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಮಾನಸಿಕವಾಗಿ ಶಕ್ತಿಯುತ ಮಹಿಳೆಯಿದ್ದೇನೆ.ಹೋರಾಟ ನಡೆಸುವ ಶಕ್ತಿ ನನಗಿದೆ. ಎಲ್ಲಾ ಮಹಿಳೆಯರಿಗೆ ಹೋರಾಡಲು ಒಂದೇ ರೀತಿಯ ಶಕ್ತಿ ಇರುವುದಿಲ್ಲವಲ್ಲ. ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಯಾಗಿರಿ. ಭಾರತವು ಕೌಟುಂಬಿಕ ಮೌಲ್ಯಗಳಿಗೆ ಹೆಸರುವಾಸಿಯಾಗಿದೆ. ಅದನ್ನು ಮುಂದುವರಿಸೋಣ. ಧನ್ಯವಾದಗಳು ಎಂದು ಬರೆದು ಮುಗಿಸಿದ್ದಾರೆ ಐಪಿಎಸ್ ಅಧಿಕಾರಿ ರೂಪ. 

Latest Indian news

Popular Stories