ನೀರಾವರಿ ಸಾಮರ್ಥ್ಯ ಬದಲಾವಣೆಯಿಂದ 15357.50 ಹೆಕ್ಟೇರ್ ನೀರಾವರಿ: ಸಚಿವ ಎಂ.ಬಿ.ಪಾಟೀಲ

ಸಮಿಯುಲ್ಲಾ ಉಸ್ತಾದ

ವಿಜಯಪುರ: ನೀರಾವರಿ ಸಾಮರ್ಥ್ಯ ಬದಲಾವಣೆಯಿಂದ ಬಬಲೇಶ್ವರ ಮತಕ್ಷೇತ್ರದ 33806 ಎಕರೆ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರದ 4200 ಎಕರೆ ಜಮೀನು ನೀರಾವರಿಗೊಳಡುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ರವಿವಾರ ಬಬಲೇಶ್ವರ ಮತಕ್ಷೇತ್ರದ ಮುಳವಾಡ ಏತ ನೀರಾವರಿ ಯೋಜನೆ ಹಂತ-3 ರಡಿಯಲ್ಲಿನ ಬಬಲೇಶ್ವರ ಶಾಖಾ ಕಾಲುವೆ-1ರ ಚೈನೇಜ್ 0.00 ರಿಂದ 40.92 ಕಿ.ಮೀ. ಮತ್ತು ಬಬಲೇಶ್ವರ ಶಾಖಾ ಕಾಲುವೆ-2ರ ಚೈನೇಜ್ 0.00 ರಿಂದ 4.165 ಕಿ.ಮೀ. ರಲ್ಲಿ ಬರುವ ವಿತರಣಾ ಕಾಲುವೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ಕಾಮಗಾರಿಯು ಒಟ್ಟು 206.44 ಕೋಟಿ ರೂ. ಕಾಮಗಾ ಆಗಿದ್ದು, ಕಾಮಗಾರಿಯನ್ನು 18 ತಿಂಗಳ ಕಾಲಾವಧಿಯಲ್ಲಿ ಗುಣಮಟ್ಟದ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿತರಣಾ ಕಾಲುವೆ ಹಾಗೂ ಮೈನರ್ ಕಾಲುವೆಗಳ ಒಟ್ಟು ಉದ್ದ 308 ಕಿ.ಮೀ. ಈ ಕಾಮಗಾರಿಯಿಂದ ಒಟ್ಟು 15,357.50 ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದ್ದು, ಬಬಲೇಶ್ವರ ತಾಲೂಕಿನ ಕಾರಜೋಳ, ಕಾಖಂಡಕಿ, ತೊನಶ್ಯಾಳ, ಸಾರವಾಡ, ದೂಡಿಹಾಳ, ಮದಗುಣಕಿ, ಶೇಗುಣಸಿ, ಕಂಬಾಗಿ, ಹಲಗಣಿ, ಬಬಲೇಶ್ವರ, ಯಕ್ಕುಂಡಿ ಹಾಗೂ ನಿಡೋಣಿ, ಕಣಮುಚನಾಳ, ದಾಶ್ಯಾಳ, ತಿಗಣಿಬಿದರಿ, ಹೊನಗನಹಳ್ಳಿ ಸೇರಿದಂತೆ 16 ಗ್ರಾಮಗಳ 13681.20 ಹೆಕ್ಟೇರ್ ಅಂದರೆ 33806.24 ಎಕರೆ ಹಾಗೂ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಕುಬಕಡ್ಡಿ ಗ್ರಾಮಗಳ ಒಟ್ಟು 1704.40 ಹೆಕ್ಟೇರ್- 4211.58 ಎಕರೆ ಜಮೀನು ಸೇರಿದಂತೆ ಒಟ್ಟಾರೆ ಎರಡು ಮತಕ್ಷೇತ್ರಗಳ 15357.50 ಹೆಕ್ಟೇರ್ ನೀರಾವರಿಗೊಳಪಡಲಿದೆ ಎಂದು ಹೇಳಿದರು.

ಬಬಲೇಶ್ವರ ಶಾಖಾ ಕಾಲುವೆಯ ಕೊನೆಯ ವಿತರಣಾ ಕಾಲುವೆ ಸಂಖ್ಯೆ 15ರ ಅಡಿಯಲ್ಲಿ ಸುಮಾರು 5309 ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದ್ದು, ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದರು.

ಮುಳವಾಡ ಏತ ನೀರಾವರಿ ಯೋಜನೆ ಹಂತ-3ರಲ್ಲಿ ಬರುವ ಬಬಲೇಶ್ವರ ಶಾಖಾ ಕಾಲುವೆ 1ರ ಚೈನೇಜ್ 0.00ರಿಂದ 40.920 ಕಿ.ಮೀ. ಹಾಗೂ ಬಬಲೇಶ್ವರ ಶಾಖಾ ಕಾಲುವೆ 2 ರ ಚೈನೇಜ್ 0.00 ರಿಂದ 4.165 ಕಿ.ಮೀ. ವರೆಗಿನ ಮುಖ್ಯ ಕಾಲುವೆ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದ್ದು, ಸದರಿ ಕಾಲುವೆಗಳಲ್ಲಿ ನೀರು ಹರಿಸಲಾಗಿದೆ ಹಾಗೂ ಕಾಲುವೆಗಳಡಿ ಬರುವ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಎಂದು ಹೇಳಿದರು.

2013ರಲ್ಲಿ ಬೃಹತ್ ನೀರಾವರಿ ಸಚಿವರಾಗಿ ಕಾರ್ಯ ಪ್ರಾರಂಭ ಮಾಡಿದಾಗ ಬಹಳಷ್ಟು ಜನರ ಆಶಯ ನಿರೀಕ್ಷೆ ನನ್ನ ಮೇಲಿತ್ತು. ಅಧಿಕಾರ ಶಾಶ್ವತ ಅಲ್ಲ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಜನರಿಗೆ ಒಳಿತು ಮಾಡುವ ಸದುದ್ದೇಶದಿಂದ ಬರದ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ತೆಗೆದು ಹಾಕಲು ಸಿದ್ದೇಶ್ವರ ಶ್ರೀಗಳ ಪ್ರೇರಣೆಯಂತೆ ನನಗೆ ಸಿಕ್ಕ ಅಧಿಕಾರಾವಧಿಯಲ್ಲಿ ಶಕ್ತಿ ಮೀರಿ ಪ್ರಯತ್ನ ಮಾಡಿ ಈ ಭಾಗದಲ್ಲಿ ಅಂತರ್ಜಲ ಹೆಚ್ಚಿಸಲು ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರೈತರಿಗೆ ನೀರು ಕೊಡುವ ಮೂಲಕ ರೈತರ ಬಾಳಿಗೆ ಬೆಳಕು ತರುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಹಂತ 3ರಲ್ಲಿ 9 ಮುಖ್ಯ ಸ್ಥಾವರ ಬಳೂತಿ ಹಣಮಾಪುರ 1 ಸಾವಿರ ಕಿ.ಮೀ. ಮೇನ್ ಕೆನಾಲ್ ಕಾಮಗಾರಿ ಕೈಗೊಂಡು ಕೆರೆಗೆ ನೀರು ಹರಿಸಲಾಗುತ್ತಿದೆ. ನೀರಾವರಿ ಕಾಮಗಾರಿಗಾಗಿ ಮುಖ್ಯಮಂತ್ರಿಗಳ ಸಹಕಾರ ಹಾಗೂ ಅಧಿಕಾರಿಗಳ ಸಹಕಾರವೂ ಈ ಹಿಂದೆ ಇತ್ತು. ರೈತರಿಗೆ ಉಪಯೋಗವಾಗುವ 5ಎ ಕಾಖಂಡಕಿ- ಬಬಲೇಶ್ವರ ಮುಖ್ಯ ಶಾಖಾ ಕಾಲುವೆ 17 ಕಿ.ಮೀ. ಜಾಕವೆಲ್ ನಿರ್ಮಿಸುವ 660 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿಗೊಳಪಡಲಿದೆ. 5ಬಿಯಲ್ಲಿ 5300 ಹೆಕ್ಟೇರ್ ನೀರಾವರಿಗೊಳಪಡಲಿದೆ. 40.92 ಕಿ.ಮೀ. ಕೊನೆಗೆ 5ಬಿಯಲ್ಲಿ ಕಲ್ಲಬೀಳಗಿ, ನಾಗರಾಳ, ಕುಮಠೆ, ಗದ್ಯಾಳ, ಹೆಬ್ಬಾಳಟ್ಟಿ, ಒಕ್ಕುಂಡಿ, ನಿಡೋಣಿ, ತಿಗಣಿಬಿದರಿ, ಸೇರಿದಂತೆ 7 ಹಳ್ಳಿಗಳು ಈ ಯೋಜನೆ ವ್ಯಾಪ್ತಿಗೊಳಪಡಲಿರುವುದರಿಂದ 5ಎ 5ಬಿ ವಿತರಣಾ ಕಾಲುವೆ ಮಂಜೂರಾತಿ ಮಾಡಿಸಿ ಈ ಭಾಗದ ಜನರ ಋಣ ತೀರಿಸುತ್ತೇನೆ. ತಿಕೋಟಾ–ಕೊಟ್ಯಾಳ ರಸ್ತೆ 15 ಕೋಟಿ ರೂ. ಅಭಿವೃದ್ದಿಪಡಿಸಲಾಗುತ್ತದೆ ಎಂದು ಹೇಳಿದರು.

ನಮ್ಮ ಸರ್ಕಾರ ಜನಪರ ಸರ್ಕಾರವಾಗಿದ್ದು, ಘೋಷಿಸಿದಂತೆ ಗೃಹಲಕ್ಷಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ 5 ಗ್ಯಾರಂಟಿಗಳನ್ನು ಜಾರಿಗೆ ತರಲು ಆಯವ್ಯಯದಲ್ಲಿ ಅನುದಾನ ಮೀಸಲಿರಿಸಲಾಗಿದೆ. ರೈತರಿಗೆ ಉಪಯೋಗವಾಗುವ ಕೃಷಿ ಹೊಂಡ, ರೈತರಿಗೆ 5 ಲಕ್ಷವರೆಗಿನ ಬಡ್ಡಿ ರಹಿತ ಸಾಲ, ಎಲ್ಲರಿಗೂ ಸೂರು ಕಲ್ಪಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ಅಧೀಕ್ಷಕ ಅಭಿಯಂತರ ಜಗದೀಶ ರಾಠೋಡ, ಸಹಾಯಕ ಅಭಿಯಂತರ ವಿನಯ ರೆಡ್ಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ಜೋಗನ್ನವರ, ಕಾರ್ಯಕಾಪಲಕ ಅಭಿಯಂತರ ಜಿ.ಎ.ನಾಗರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Latest Indian news

Popular Stories