ನ್ಯೂಜಿಲೆಂಡ್ ವಿರುದ್ಧ ಸರಣಿ ಕ್ಲೀನ್ ಸ್ವೀಪ್: ಏಕದಿನ ಐಸಿಸಿ ರ‍್ಯಾಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ

ಇಂದೋರ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ 90 ರನ್ ಗಳಿಂದ ಗೆಲುವು ಸಾಧಿಸಿದ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇದರೊಂದಿಗೆ ಏಕದಿನ ಐಸಿಸಿ ರ‍್ಯಾಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ 101, ಶುಭ್ ಮನ್ ಗಿಲ್ 112 ರನ್ ಗಳಿಸುವ ಮೂಲಕ ಗೆಲುವಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ನಂತರ ಬಂದ ವಿರಾಟ್ ಕೊಹ್ಲಿ, 36, ಇಶಾನ್ ಕಿಶಾನ್ 14, ಹಾರ್ದಿಕ್ ಪಾಂಡ್ಯ ಭರ್ಜರಿ ಅರ್ಧ ಶತಕ (54) ಗಳಿಸುವ ಮೂಲಕ ಟೀಂ ಇಂಡಿಯಾದ ರನ್ ವೇಗವನ್ನು ಹೆಚ್ಚಿಸಿದರು. ಉಳಿದಂತೆ ವಾಷಿಂಗ್ಟನ್ ಸುಂದರ್ 9, ಶಾರ್ದೂಲ್ ಠಾಕೂರ್ 25, ಕುಲದೀಪ್ ಯಾದವ್ 3, ಉಮ್ರಾನ್ ಮಲ್ಲಿಕ್ 2 ರನ್ ಗಳಿಸುವುದರೊಂದಿಗೆ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ಬೃಹತ್ ಮೊತ್ತ ಪೇರಿಸಿತು.

ಈ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡ ಆರಂಭಿಕ ಆಟಗಾರ ಫಿನ್ ಅಲೆನ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಡೇವೊನ್ ಕಾನ್ ವೇ 138 ರನ್ ಸಿಡಿಸಿ ಭಾರತಕ್ಕೆ ಸ್ವಲ್ಪ ಕಾಡಿದರು. ಆದರೂ, ಅವರನ್ನು ಫೆವಿಲಿಯನ್ ಗೆ ಅಟ್ಟುವಲ್ಲಿ ಉಮ್ರಾನ್ ಮಲ್ಲಿಕ್ ಯಶಸ್ವಿಯಾದರು. ನಂತರ ಬಂದ ಯಾವೊಬ್ಬ ಆಟಗಾರರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲಲಿಲ್ಲ. ಹೀಗಾಗಿ ನ್ಯೂಜಿಲೆಂಡ್ 41. 2 ಓವರ್ ಗಳಲ್ಲಿ 295 ರನ್ ಗಳಿಗೆ ಆಲೌಟ್ ಆಗುವ ಮೂಲಕ ಭಾರತ 90 ರನ್ ಗಳಿಂದ ಭರ್ಜರಿ ಗೆಲುವು ಸಾಧಿಸಿತು.

ಭಾರತ ಪರ ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದರೆ, ಚಹಲ್ 2, ಹಾರ್ದಿಕ್ ಪಾಂಡ್ಯ ಹಾಗೂ ಉಮ್ರಾನ್ ಮಲ್ಲಿಕ್ ತಲಾ 1 ವಿಕೆಟ್ ಪಡೆದರು. ಶಾರ್ದೂಲ್ ಠಾಕೂರ್ ಪ್ಲೇಯರ್ ಆಫ್ ದಿ ಮ್ಯಾಚ್, ಶುಭಮನ್ ಗಿಲ್, ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Latest Indian news

Popular Stories