ಪಂಜಾಬ್‌ನಲ್ಲಿ 6 ದಿನಗಳ ನಂತರ ಹಿಮಾಚಲ ಪ್ರದೇಶವನ್ನು ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆ

ಶಿಮ್ಲಾ: ಪಂಜಾಬ್‌ನಲ್ಲಿ ಆರು ದಿನಗಳ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ಹಿಮಾಚಲ ಪ್ರದೇಶಕ್ಕೆ ಪ್ರವೇಶಿಸಿತು. ಈ ವೇಳೆ ಅಲ್ಲಿನ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು, ಪಕ್ಷದ ರಾಜ್ಯಾಧ್ಯಕ್ಷೆ ಪ್ರತಿಭಾ ಸಿಂಗ್ ಮತ್ತು ಇತರ ಪಕ್ಷದ ನಾಯಕರು ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು.

ಗಡಿ ಗ್ರಾಮವಾದ ಘತೋಟದಲ್ಲಿ ಧ್ವಜ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ರಾಹುಲ್ ಗಾಂಧಿ ಮಾತನಾಡಿ, ‘ಯಾತ್ರೆ ಹಿಮಾಚಲ ಪ್ರದೇಶದ ಮೂಲಕ ಹಾದು ಹೋಗಬೇಕೆಂದು ನೀವು ಕೇಳಿದ್ದೀರಿ. ಹೀಗಾಗಿಯೇ ನಾವು ಸಂಪೂರ್ಣ ಮಾರ್ಗವನ್ನು ಬದಲಾಯಿಸಿದ್ದೇವೆ. ಹಿಮಾಚಲ ಪ್ರದೇಶಕ್ಕೆ ಸ್ವಲ್ಪ ಸಮಯ ಕೊಟ್ಟಿದ್ದೇವೆ. ಅದು ಒಂದೇ ದಿನ. ಆದರೆ, ಹೆಚ್ಚು ಸಮಯ ಕೊಡಬೇಕಿತ್ತು. ಆದರೆ ಆಗುತ್ತಿಲ್ಲ. ಏಕೆಂದರೆ, ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯಾದ ಜನವರಿ 30 ರಂದು ಯಾತ್ರೆಯು ಶ್ರೀನಗರವನ್ನು ತಲುಪಬೇಕು ಎಂದು ಹೇಳಿದರು.


ವಿಧಾನಸಭೆ ಚುನಾವಣೆಗೂ ಮುನ್ನ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಭರವಸೆ ನೀಡಿದ್ದೆ. ಅದರಂತೆ ಪಕ್ಷ ಇಲ್ಲಿ ವಿಜಯ ಸಾಧಿಸಿದೆ ಎಂದು ಪ್ರತಿಭಾ ಸಿಂಗ್ ತಿಳಿಸಿದರು.

ದೇವ ಭೂಮಿಯಲ್ಲಿ ವಿಜಯ ಪ್ರಾರಂಭವಾಗಿದೆ ಮತ್ತು ಅದೇ ರೀತಿ ನಾವು ಪ್ರತಿ ರಾಜ್ಯದಲ್ಲೂ ಕಾಂಗ್ರೆಸ್ ಧ್ವಜವನ್ನು ಹಾರಿಸುತ್ತೇವೆ ಎಂದು ಅವರು ಹೇಳಿದರು.

ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಮೆರವಣಿಗೆ ಜನವರಿ 30 ರೊಳಗೆ ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿದ್ದು, ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ.

ಯಾತ್ರೆಯು ಈವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣವನ್ನು ಪೂರೈಸಿದೆ.

Latest Indian news

Popular Stories