ಮೊಹಾಲಿ: ಪಂಜಾಬ್ನ ಮೊಹಾಲಿಯಲ್ಲಿರುವ ರಾಜ್ಯ ಗುಪ್ತಚರ ಇಲಾಖೆ ಕಚೇರಿ ಮೇಲೆ ನಡೆಸಲಾಗಿರುವ ದಾಳಿ ಪ್ರಕರಣದ ಹಿಂದೆ ಉಗ್ರರ ಕೈವಾಡ ಇರುವ ಶಂಕೆಗಳನ್ನು ಪಂಜಾಬ್ ಪೊಲೀಸರು ಮಂಗಳವಾರ ನಿರಾಕರಿಸಿದ್ದಾರೆ.
ಗುಪ್ತಚರ ವಿಭಾಗದ ಕೇಂದ್ರ ಕಚೇರಿಯ ಮೇಲೆ ರಾಕೆಟ್ ಲಾಂಚರ್‌ನಿಂದ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ, ಗಾಯಗಳು ಸಂಭವಿಸಿಲ್ಲ. ಆದರೆ, ಕಟ್ಟದ ಗಾಜುಗಳು ಒಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಹಾಲಿಯ ಸೆಕ್ಟರ್ 77 ರಲ್ಲಿರುವ ಪಂಜಾಬ್ ಪೊಲೀಸ್ ಇಂಟೆಲಿಜೆನ್ಸ್ ಕಟ್ಟಡದಲ್ಲಿ ನಿನ್ನೆ ರಾತ್ರಿ 7:45ಕ್ಕೆ ಘಟನೆ ನಡೆದಿದೆ. ಮೊದಲಿಗೆ ಇದೊಂದು ಭಯೋತ್ಪಾದಕ ದಾಳಿ ಎಂದೇ ಹೇಳಲಾಗಿತ್ತು. ಆದರೆ, ಮೊಹಾಲಿ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಯೋತ್ಪಾದಕರ ಕೃತ್ಯ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ಫೋಟದ ನಂತರ ವಿಧಿ ವಿಜ್ಞಾನ ತಜ್ಞರ ತಂಡ ಸ್ಥಳಕ್ಕಾಗಮಿಸಿದ್ದು ಪರಿಶೀಲನೆ ನಡೆಸಿತು. ಕಟ್ಟಡದ ಸುತ್ತಮುತ್ತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮೊಹಾಲಿ ಎಸ್’ಪಿ ರವೀಂದರ್ ಪಾಲ್ ಸಿಂಗ್ ಅವರು ಮಾತನಾಡಿ, ಉಗ್ರರ ಕೃತ್ಯ ಶಂಕೆಯನ್ನು ನಿರಾಕರಿಸುವಂತಿಲ್ಲ. ಈ ಆಯಾಮದಲ್ಲೂ ತನಿಖೆ ಆರಂಭವಾದಿದೆ. ಇದು ಸಣ್ಣ ಪ್ರಮಾಣದ ಸ್ಫೋಟವಾಗಿದ್ದು, ಕಟ್ಟಡದ ಹೊರಾಂಗಣದಲ್ಲಿ ದಾಳಿ ನಡೆದಿದೆ. ರಾಕೆಟ್ ಲಾಂಚರ್ ಮೂಲಕ ನಡೆಸಿರುವ ದಾಳಿ ಇದಾಗಿದ್ದು, ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಹಿರಿಯ ಅಧಿಕಾರಿಗಳು, ಎಫ್ಎಸ್ಎಲ್ ತಂಡ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳುಹಿಸುತ್ತಿವೆ. ಇತ್ತೀಚೆಗೆ ಕರ್ನಾಲ್ ಬಳಿಕ ತರ್ನ್ ತರನ್ ಜಿಲ್ಲೆಯಲ್ಲಿ ಲೋಹದ ಕಪ್ಪು ಪೆಟ್ಟಿಗೆಯಲ್ಲಿ ಆರ್‌ಡಿಎಕ್ಸ್ ಪ್ಯಾಕ್ ದೊರೆತಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ. ಪೊಲೀಸರು 2.5 ಕೆಜಿ ಆರ್‌ಡಿಎಕ್ಸ್ ವಶಪಡಿಕೊಂಡಿದ್ದರು. ಇದಾದ ಬಳಿಕ ನಿನ್ನೆ ರಾತ್ರಿ ದಾಳಿ ನಡೆದಿದೆ.
ಗುಪ್ತಚರ ಕಚೇರಿಯ ಮೂರನೇ ಮಹಡಿಗೆ ರಾಕೆಟ್ ಚಾಲಿತ ಗ್ರೆನೇಡ್ ಎಸೆಯಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸ್ಫೋಟ ಸಂಭವಿಸಿದ್ದು, ರಭಸಕ್ಕೆ ಕಟ್ಟಡದ ಕಿಟಕಿಗಳು ಒಡೆದಿವೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಹಿರಿಯ ಪೊಲೀಸ್ ಅಧಿಕಾರಿ ನಿರಾಕರಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿಗಳು ಪ್ರಕರಣ ಸಂಬಂಧ ಡಿಜಿಪಿಯಿಂದ ವಿಸ್ತೃತ ವರದಿ ಕೇಳಿದ್ದಾರೆಂದು ತಿಳಿದುಬಂದಿದೆ.
ಅಲ್ಲದೆ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಭಗವಂತ್ ಮಾನ್ ಅವರು, ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.