ಪಾಕಿಸ್ತಾನ ಮೂಲದ ಪ್ರಜೆಯೊರ್ವರಿಂದ ಟರ್ಕಿ-ಸಿರಿಯಾ ಭೂಕಂಪ ಸಂತ್ರಸ್ಥರಿಗೆ 249 ಕೋಟಿ ಧನ ಸಹಾಯ!

ಟರ್ಕಿ ಮತ್ತು ಸಿರಿಯಾ (Turkey earthquake) ಭೂಕಂಪದಿಂದ ತತ್ತರಿಸಿದೆ. ಕಳೆದ ಸೋಮವಾರ ಸಂಭವಿಸಿದ ದುರಂತದಿಂದ ಸುಮಾರು 35 ಸಾವಿರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಎರಡು ರಾಷ್ಟ್ರಗಳು ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಭಾರತ (India) ಸೇರಿ ಹಲವು ರಾಷ್ಟ್ರಗಳು ರಕ್ಷಣಾ ಕಾರ್ಯಕ್ಕೆ (Rescue Operation) ನೆರವಾಗುತ್ತಿವೆ.

ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ (Pakistan) ತೀವ್ರ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲೂ ಅಮೆರಿಕಾದಲ್ಲಿರುವ (America) ಪಾಕಿಸ್ತಾನ ಮೂಲದ ಪ್ರಜೆಯೊಬ್ಬ ಭೂಕಂಪದಿಂದ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ನೆರವಾಗಲೂ ಬರೋಬ್ಬರಿ 30 ಮಿಲಿಯನ್ ಡಾಲರ್ (ಸುಮಾರು 249 ಕೋಟಿ ರೂಪಾಯಿ)​ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಆ ವ್ಯಕ್ತಿ ತನ್ನ ಹೆಸರನ್ನು ಬಹಿರಂಗ ಪಡಿಸಿಲ್ಲ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಸ್ವತಃ ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹ್ಬಾಜ್​ ಶರೀಫ್ (Pakistan PM Shehbaz Sharif) ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಅನಾಮಿಕ ವ್ಯಕ್ತಿಯೊಬ್ಬ ಟರ್ಕಿಯ ರಾಯಭಾರಿ ಕಚೇರಿಗೆ ತೆರಳಿದ್ದು, 30 ಮಿಲಿಯನ್​ ಡಾಲರ್​ ಮೊತ್ತವನ್ನು ಭೂಕಂಪದಿಂದ ತತ್ತರಿಸಿರುವ ಟರ್ಕಿ​ ಮತ್ತು ಸಿರಿಯಾ ಸಂತ್ರಸ್ತರಿಗಾಗಿ ನೀಡಿದ್ದಾರೆ. ಇದು ಪರೋಪಕಾರದ ಅದ್ಭುತ ಕಾರ್ಯವಾಗಿದೆ ಮತ್ತು ಮಾನವೀಯತೆಯನ್ನು ಜಯಿಸಲು ಅನುವು ಮಾಡಿಕೊಡುತ್ತದೆ ” ಎಂದು ಟ್ವೀಟ್ ಮಾಡಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪದ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಲು ಮತ್ತು ಪರಿಹಾರ ಒದಗಿಸಲು ಪಾಕಿಸ್ತಾನ ಸರ್ಕಾರ ಕಳೆದ ವಾರ ವಿಶೇಷ ಸಮಿತಿಯನ್ನು ರಚಿಸಿತ್ತು. ಇದಲ್ಲದೆ, ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಟರ್ಕಿಯಲ್ಲಿನ ಸಂತ್ರಸ್ತರಿಗೆ ನೆರವಾಗಲು ಎರಡು ವಿಮಾನಗಳು ಪರಿಹಾರ ಸಾಮಗ್ರಿಗಳೊಂದಿಗೆ ಟರ್ಕಿಗೆ ಕಳುಹಿಸಲಾಗಿದೆ ಎಂದು ತನ್ನ ಟ್ವಿಟರ್ ಮೂಲಕ ತಿಳಿಸಿದೆ.

Latest Indian news

Popular Stories