ಪಿಎಫ್ ಐ, ಎಸ್ ಡಿಪಿಐ ಮತಗಳು ನಮಗೆ ಬೇಕಾಗಿಲ್ಲ – ಸಚಿವ ಕೆ.ಎಸ್ ಈಶ್ವರಪ್ಪ

ಮೈಸೂರು: ಪಿಎಫ್ ಐ, ಎಸ್ ಡಿಪಿಐ ಮತಗಳು ನಮಗೆ ಬೇಕಾಗಿಲ್ಲ. ಭಯೋತ್ಪಾದನೆ ಬೆಂಬಲಿಸುವ ಸಂಘಟನೆಗಳ ಮತ ನಮಗೆ ಬೇಕಾಗಿಲ್ಲ. ರಾಷ್ಟ್ರೀಯವಾದಿ ಮುಸ್ಲಿಮರು ನಮಗೆ ಮತ ಹಾಕುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮೈಸೂರಿನಲ್ಲಿ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಹಣ ಕೊಟ್ಟು ಜನರನ್ನು ಕರೆಸುವುದು ಅಭ್ಯಾಸವಾಗಿದೆ. ಹಾಗಾಗಿ ಬಿಜೆಪಿಯವರು ಹಣ ಕೊಟ್ಟು ಜನರನ್ನು ಕರೆಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಿಗುತ್ತಿರುವ ಅಪಾರ ಬೆಂಬಲದಿಂದ ವಿಚಲಿತರಾಗಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ‌. 500 ರೂಪಾಯಿ ಕೊಟ್ಟು ಜನರನ್ನು ಸಭೆಗೆ ಕರೆ ತರುವಂತೆ ಸಿದ್ದರಾಮಯ್ಯ ಹೇಳಿರುವುದನ್ನು ಇಡೀ ದೇಶದ ಜನರು ನೋಡಿದ್ದಾರೆ. ಅವರ ಮೇಲೆ ಬಂದಿರುವ ತಪ್ಪನ್ನು ಮರೆಮಾಚಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ, ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಹಲವು ದಶಕಳಿಂದ ನೆನೆಗುದಿಗೆ ಬಿದ್ದಿದ್ದ ಎಸ್ ಸಿ, ಎಸ್ ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದೇವೆ. ಹಿಂದುಳಿದ ವರ್ಗ ಹಾಗು ದಲಿತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಪರಿಣಾಮ ಬಿಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಮೀರಿದ ಜನ ಬೆಂಬಲ ವ್ಯಕ್ತ ಆಗುತ್ತಿದೆ. ರಾಜ್ಯದ ಜನರು ನಮ್ಮ ಜೊತೆ ಇರುವುದು ಸ್ಪಷ್ಟವಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.

ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವ, ಸಂಘಟನೆ ಹಾಗೂ ನಾವು ಮಾಡಿರುವ ಅಭಿವೃದ್ಧಿ, ಸಂಸ್ಕೃತಿ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ನಾಲ್ಕು ಅಂಶದ ಮೇಲೆ ಮತ ಕೇಳುತ್ತಿದ್ದೇವೆ ಎಂದರು.

Latest Indian news

Popular Stories