ಕಲಬುರಗಿ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಪಿಎಸ್ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದ 26 ಆರೋಪಿಗಳಿಗೆ ಗುರುವಾರ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಕಿಂಗ್ಪಿನ್ ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ, ಡಿವೈಎಸ್ಪಿ ಮಲ್ಲಿಕಾರ್ಜುನ ಸೇರಿದಂತೆ 26 ಜನರಿಗೆ ಕಲಬುರಗಿ ಸೆಷನ್ಸ್ ಕೋರ್ಟ್ ಜಡ್ಜ್ ಕೆ.ಬಿ.ಪಾಟೀಲ್ ಜಾಮೀನು ನೀಡಿದ್ದಾರೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ಈವರೆಗೆ 36 ಜನರಿಗೆ ಜಾಮೀನು ಸಿಕ್ಕಿದೆ. 8 ಅಭ್ಯರ್ಥಿಗಳು, 5 ಪರೀಕ್ಷಾ ಮೇಲ್ವಿಚಾರಕಿಯರು, 3 ಪೊಲೀಸ್ ಇಲಾಖೆ ಅಧಿಕಾರಿಗಳು, ಮಧ್ಯವರ್ತಿಗಳು ಸೇರಿ 26 ಜನರಿಗೆ ಜಾಮೀನು ನೀಡಲಾಗಿದೆ.
ರಾಜ್ಯದಲ್ಲಿ 2021 ರ ಅಕ್ಟೋಬರ್ ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆದಿತ್ತು. ಆದರೆ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಬೆಳಕಿಗೆ ಬಂದಿತ್ತು. ಹೀಗಾಗಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತ್ತು. 2022 ರ ಎಪ್ರಿಲ್ 8 ರಂದು ಕಲಬುರಗಿ ಚೌಕ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ತನಿಖೆ ಆರಂಭಿಸಿದ್ದ ಸಿಐಡಿ ಪೊಲೀಸರು ಇಲ್ಲಿವರಗೆ 53 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.