ಪ್ರಚೋದನಕಾರಿ ಪೋಸ್ಟ್: ನೂಪುರ್ ಶರ್ಮಾ, ನವೀನ್ ಜಿಂದಾಲ್, ಓವೈಸಿ ಇತರರ ವಿರುದ್ಧ ಎಫ್ ಐಆರ್ ದಾಖಲು

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕ ಶಾಂತಿ ಕದಡುವ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ, ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ, ಉಚ್ಛಾಟಿತ ನಾಯಕ ನವೀನ್ ಜಿಂದಾಲ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಮತ್ತು ಪತ್ರಕರ್ತ ಸಾಬಾ ನಖ್ವಿ ಸೇರಿದಂತೆ ಇತರರ ವಿರುದ್ಧ ದೆಹಲಿ ಪೊಲೀಸರು ಗುರುವಾರ ಎಫ್ ಐ ಆರ್ ದಾಖಲಿಸಿದ್ದಾರೆ.

ಈ ಸಂಬಂಧ ದೆಹಲಿ ಪೊಲೀಸರು ಎರಡು ಎಫ್‌ಐಆರ್ ಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಮೊದಲ ಎಫ್‌ಐಆರ್ ನಲ್ಲಿ ನೂಪುರ್ ಶರ್ಮಾ ಹೆಸರಿದ್ದರೆ, ಎರಡನೆ ಎಫ್‌ಐಆರ್ ನಲ್ಲಿ ನವೀನ್ ಜಿಂದಾಲ್, ಅಸಾದುದ್ದೀನ್ ಓವೈಸಿ, ಶಾದಾಬ್ ಚೌಹಾಣ್, ಸಬ್ ನಖ್ವಿ, ಮೌಲಾನಾ ಮುಫ್ತಿ ನದೀಮ್, ಅಬ್ದುರ್ ರೆಹಮಾನ್, ಗುಲ್ಜಾರ್ ಅನ್ಸಾರಿ ಮತ್ತು ಅನಿಲ್ ಕುಮಾರ್ ಮೀನಾ ಅವರ ಹೆಸರಿದೆ.

“ವಿವಿಧ ಗುಂಪುಗಳನ್ನು ಪ್ರಚೋದಿಸುವ ಮತ್ತು ದೇಶದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಿಸಿರುವ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ಸೆಲ್‌ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್(ಐಎಫ್ ಎಸ್‌ಒ) ಘಟಕ ಎಫ್‌ಐಆರ್ ದಾಖಲಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ ಪೋಸ್ಟ್‌ಗಳು ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ಪೊಲೀಸರು ಹೇಳಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ.

Latest Indian news

Popular Stories