ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ನಾಗರೀಕ ಯುದ್ಧ ಎದುರಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸ್ಥಳೀಯ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್‌ಗೆ ಬರಮಾಡಿ ಕೊಂಡ ನಂತರ ಮಾತನಾಡಿದ ಅವರು, “ಕೋಮು ಶಕ್ತಿಗಳನ್ನು” ಸೋಲಿಸುವಂತೆ ಜನತೆಗೆ ಕರೆ ನೀಡಿದರು.
‘ಸಾರ್ವಜನಿಕರ ಪ್ರಾಣ, ಆಸ್ತಿ ರಕ್ಷಣೆ ಮಾಡುವವರು ಪ್ರಚೋದನಕಾರಿ ಹೇಳಿಕೆ ನೀಡಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ’. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದರೆ, ಸಮಾಜದಲ್ಲಿ ಶಾಂತಿಗೆ ಧಕ್ಕೆ ಉಂಟಾಗುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆಗೆ ಜೆಡಿಎಸ್ ಕಾರಣ ಎಂದು ಹೇಳಿದ ಅವರು, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳದೇ ಇದ್ದಿದ್ದರೆ ಇಂದು ಈ ಸ್ಥಿತಿ ಇರುತ್ತಿರಲಿಲ್ಲ. ಕೋಮುವಾದಿ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಕುಮಾರಸ್ವಾಮಿ ಈಗ ಜಾತ್ಯತೀತ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ನಡುವೆ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ಅವರು ಆಡಿರುವ ಮಾತು ವಿಧಾನಸಭೆಯಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ಹೇಳಿಕೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತಯೇ ಸ್ಪಷ್ಟನೆ ನೀಡಿದ ಅಶ್ವತ್ಥ್ ನಾರಾಯಣ್ ಅವರು, ಟಿಪ್ಪು ಸುಲ್ತಾನ್ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೋಲಿಸಿ ಆಡಿರುವ ಮಾತುಗಳು ಸಾಂದರ್ಭಿಕ ಪ್ರಸ್ತಾಪವೇ ವಿನಃ ಯಾವುದೇ ದುರುದ್ದೇಶದ ಮಾತುಗಳಲ್ಲ, ರಾಜಕೀಯ ಭಾಷಣ ಮಾಡುವಾಗ ಬಂದು ಹೋದ ಮಾತುಗಳಷ್ಟೆ, ಅವರಲ್ಲಿ ನನಗೆ ವೈಯಕ್ತಿಕ ದ್ವೇಷವಿಲ್ಲ, ಅವರನ್ನು ಕೊಂದುಹಾಕಿ ಎಂಬರ್ಥದಲ್ಲಿ ನಾನು ಆಡಿದ ಮಾತುಗಳಲ್ಲ ಎಂದು ಹೇಳಿದ್ದಾರೆ.