ಪ್ರದೀಪ್ ಆತ್ಮಹತ್ಯೆ ಪ್ರಕರಣ: ಅರವಿಂದ್ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ತಲೆಗೆ‌ ಗುಂಡು ಹಾರಿಸಿಕೊಂಡು ಪ್ರದೀಪ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿ 6 ಮಂದಿ ವಿರುದ್ಧ ಎಫ್​​ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಅರವಿಂದ ಲಿಂಬಾವಳಿ ಸೇರಿದಂತೆ ಆರು ಜನರ ವಿರುದ್ಧ ಕೂಡ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರಡಿ (ಆತ್ಮಹತ್ಯೆಗೆ ಪ್ರಚೋದನೆ) ಎಫ್​ಐಆರ್ ದಾಖಲಾಗಿದೆ.

ಉದ್ಯಮಿ ಪ್ರದೀಪ್ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಎಫ್​ಐಆರ್​​ ದಾಖಲಿಸಿದ್ದಾರೆ. ಡೆತ್‌ನೋಟ್‌ನಲ್ಲಿ ಅರವಿಂದ ಲಿಂಬಾವಳಿ, ಜಿ.ರಮೇಶ್‌ ರೆಡ್ಡಿ, ಕೆ.ಗೋಪಿ‌, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖವಾಗಿದ್ದು, ಎಲ್ಲರೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆತ್ಮಹತ್ಯೆಗೆ ಶರಣಾದ ಪ್ರದೀಪ್​​ ಕೊನೆ ಬಾರಿಗೆ ಕರೆ ಮಾಡಿದ್ದು ಯಾರಿಗೆ..? ಪ್ರದೀಪ್​ ಜತೆಗೆ ಯಾಱರಿಗೆ ಸಂಬಂಧ ಇದೆ. ಮೃತ ಪ್ರದೀಪ್​​ ಯಾರೊಂದಿಗೆ ವ್ಯವಹಾರ ಮಾಡಿದ್ದರು. ಆತನ ವಾಟ್ಸಪ್​​ನಲ್ಲಿ ಡೀಟೈಲ್ಸ್​ ಏನಿದೆ..? ಆತ್ಮಹತ್ಯೆ​ ಮಾಡಿಕೊಳ್ಳುವಾಗ ಬಳಸಿದ ಗನ್​ ಯಾರದ್ದು..? ಅದರ ಲೈಸನ್ಸ್​ ನಂಬರ್​​ ಏನು..? ಗನ್​​ ಮೇಲಿರೋ ಬೆರಳಚ್ಚು ಯಾರದ್ದು..? ಹೀಗೆ ಹತ್ತಾರು ವಿಚಾರಗಳ ಕುರಿತಾದ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಮೃತ ವ್ಯಕ್ತಿಯು ಮೈಸೂರು ನಿವಾಸಿಯಾಗಿದ್ದು, ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದ. ಕಾರಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಈತ ಗೋಪಿ, ಸೋಮಯ್ಯ, ರಮೇಶ್ ರೆಡ್ಡಿ, ಅರವಿಂದ ಲಿಂಬಾವಳಿ, ಡಾ. ಜಯರಾಮ್ ರೆಡ್ಡಿ, ರಾಘವ ಭಟ್​ ನನ್ನ ಸಾವಿಗೆ ಕಾರಣ ಎಂದು ಬರೆದಿದ್ದ.

Latest Indian news

Popular Stories