ನವದೆಹಲಿ: ಉದ್ಯೋಗದ ಬೆನ್ನತ್ತಿ ಓಡುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಜನರನ್ನು ಒತ್ತಾಯಿಸಿದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಹಾಗಿದ್ದರೆ, ಪ್ರಧಾನಿ ನರೇಂದ್ರ ಮೋದಿಯವರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆಯು ಏನು ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ್ದ ಮೋಹನ್ ಭಾಗವತ್, ‘ತಾವು ಮಾಡುವ ಕೆಲಸದಲ್ಲಿ ಕಾರ್ಮಿಕರಿಗೆ ಗೌರವದ ಕೊರತೆಯು ದೇಶದಲ್ಲಿ ನಿರುದ್ಯೋಗದ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಎಲ್ಲರೂ ಉದ್ಯೋಗಗಳ ಹಿಂದೆ ಓಡುತ್ತಾರೆ. ಇತರ ಉದ್ಯೋಗಗಳು ಶೇ 20ರಷ್ಟಿದ್ದರೆ, ಸರ್ಕಾರಿ ಉದ್ಯೋಗಗಳು ಕೇವಲ ಶೇ 10ರಷ್ಟು ಮಾತ್ರ. ವಿಶ್ವದ ಯಾವುದೇ ಸಮಾಜ ಶೇ 30ಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಹೀಗಾಗಿ ಉದ್ಯೋಗದ ಬೆನ್ನತ್ತಿ ಓಡುವ ಪ್ರವೃತ್ತಿ ನಿಲ್ಲಿಸಬೇಕು. ಯಾವುದೇ ರೀತಿಯಾದ ಕೆಲಸವಾದರೂ ಅದನ್ನು ಗೌರವಿಸುವ ಸ್ವಭಾವವನ್ನು ಜನರು ರೂಢಿಸಿಕೊಳ್ಳಬೇಕು’ ಎಂದು ಹೇಳಿದ್ದರು.
ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿಬಲ್, ‘ಮೋಹನ್ ಭಾಗವತ್ ಅವರು ‘ಸರ್ಕಾರಿ ಉದ್ಯೋಗಗಳನ್ನು ಬೆನ್ನಟ್ಟಬೇಡಿ’ ಎನ್ನುತ್ತಾರೆ. ಹಾಗಿದ್ದರೆ, ಖಾಸಗಿ ಉದ್ಯೋಗಗಳು ಎಲ್ಲಿವೆ ಭಾಗವತ್ ಜೀ? ಮತ್ತು ಮೋದಿಜಿ ಭರವಸೆ ನೀಡಿದ ವರ್ಷಕ್ಕೆ 2 ಕೋಟಿ ಉದ್ಯೋಗಗಳು ಏತಕ್ಕಾಗಿ!’ ಎಂದು ಮಾಜಿ ಕೇಂದ್ರ ಸಚಿವರು ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವತ್ ಅವರು ಸಮಾಜಕ್ಕಾಗಿ ಮಾಡುವ ಯಾವುದೇ ಕೆಲಸವನ್ನು ದೊಡ್ಡದು ಅಥವಾ ಚಿಕ್ಕದು ಎಂದು ಹೆಸರಿಸಲಾಗುವುದಿಲ್ಲ. ಜನರು ಯಾವುದೇ ರೀತಿಯ ಕೆಲಸ ಮಾಡಿದರೂ ಅದನ್ನು ಗೌರವಿಸಬೇಕು. ಕೆಲಸಕ್ಕೆ ಶಾರೀರಿಕ ಶ್ರಮ ಬೇಕೋ ಅಥವಾ ಬುದ್ಧಿಶಕ್ತಿ ಬೇಕೋ, ಕಠಿಣ ಪರಿಶ್ರಮವೋ, ಮೃದು ಕೌಶಲ್ಯವೋ ಒಟ್ಟಿನಲ್ಲಿ ಎಲ್ಲವನ್ನೂ ಗೌರವಿಸಬೇಕು ಎಂದು ಹೇಳಿದ್ದರು.