ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುವವರಿಗೆ 14 ಲಕ್ಷ ರೂಪಾಯಿ ಬಹುಮಾನ ಘೋಷಣೆ

ಕಾಸರಗೋಡು, ಜನವರಿ 5: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಾಗಿರುವ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡುವವರಿಗೆ 14 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಘೋಷಿಸಿದೆ.

ಸುಳ್ಯದ ಬುಡುಮನೆಯ ಎಸ್ ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತಫಾ ಪೈಚಾರ್ ಮತ್ತು ಮಡಿಕೇರಿಯ ಎಂ ಎಚ್ ತೌಫಲ್ ಅವರನ್ನು ಪತ್ತೆ ಹಚ್ಚಲು ಸಹಾಯ ಮಾಡುವವರಿಗೆ ತಲಾ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ. ದಕ್ಷಿಣ ಕನ್ನಡದ ಕಲ್ಲುಮುಟ್ಟಲು ವೀಟಿಲ್ ನಿವಾಸಿ ಎಂ ಆರ್ ಉಮ್ಮರ್ ಫಾರೂಕ್ ಅಲಿಯಾಸ್ ಉಮ್ಮರ್ ಮತ್ತು ಸಿದ್ದಿಕ್ ಅಲಿಯಾಸ್ ಪೇಂಟರ್ ಸಿದ್ದಿಕ್ ಅಲಿಯಾಸ್ ಗುಜುರಿ ಸಿದ್ದಿಕ್ ಅವರನ್ನು ಪತ್ತೆ ಹಚ್ಚಲು ಸಹಾಯ ಮಾಡುವವರಿಗೆ ತಲಾ ಎರಡು ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಆರೋಪಿಗಳು ಕೇರಳ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿರುವುದರಿಂದ ಕ್ಯಾಲಿಕಟ್ ಜಿಲ್ಲೆಯ ವಿವಿಧೆಡೆ ಬಹುಮಾನದ ನೋಟೀಸ್ ಹಾಕಲಾಗಿದೆ.

Latest Indian news

Popular Stories