ಫೋರ್ಬ್ಸ್‌ನಿಂದ ವಿಶ್ವದ ಶ್ರೀಮಂತರ ಪಟ್ಟಿ ಪ್ರಕಟ: ಅಂಬಾನಿ ನಂ.9, ಅದಾನಿ ನಂ.24ಕ್ಕೆ ಕುಸಿತ

ವಾಷಿಂಗ್ಟನ್‌: ವಿಶ್ವದ ದೊಡ್ಡ ಶ್ರೀಮಂತರ ಪಟ್ಟಿಯನ್ನು ಫೋರ್ಬ್ಸ್‌ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್‌ ಅಂಬಾನಿ 9ನೇ ಸ್ಥಾನದಲ್ಲಿದ್ದಾರೆ. ಅದಾನಿ ಸಮೂಹದ ಗೌತಮ್‌ ಅದಾನಿ 24ನೇ ಸ್ಥಾನದಲ್ಲಿದ್ದಾರೆ.

ಸತತ ಎರಡನೇ ವರ್ಷ ಟಾಪ್‌-10 ಪಟ್ಟಿಯಲ್ಲಿ ಮುಕೇಶ್‌ ಅಂಬಾನಿ ಸ್ಥಾನ ಪಡೆದಿದ್ದು, ಅವರು 2023ರಲ್ಲಿ 83.4 ಶತಕೋಟಿ ಡಾಲರ್‌ (ಸುಮಾರು 6.59 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ. ಅಲ್ಲದೇ, ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯೆನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ.

ಮುಕೇಶ್‌ ಅಂಬಾನಿ ಮತ್ತೊಮ್ಮೆ ಈ ವರ್ಷದ ಪಟ್ಟಿಯಲ್ಲಿ ಮೈಕ್ರೋಸಾಫ್ಟ್‌ನ ಸ್ಟೀವ್‌ ಬಾಲ್ಮರ್‌, ಗೂಗಲ್‌ನ ಲ್ಯಾರಿ ಪೇಜ್‌ ಮತ್ತು ಸೆರ್ಗೆ ಬ್ರಿನ್‌, ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌ ಮತ್ತು ಡೆಲ್‌ ಟೆಕ್ನಾಲಜೀಸ್‌ನ ಮೈಕೆಲ್‌ ಡೆಲ್‌ಗಿಂತ ಮೇಲಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಬರ್ನಾರ್ಡ್‌ ಅರ್ನಾಲ್ಟ್‌ ಮೊದಲ ಸ್ಥಾನದಲ್ಲಿದ್ದು, 211 ಶತಕೋಟಿ ಡಾಲರ್‌ (ಸುಮಾರು 17.30 ಲಕ್ಷ ಕೋಟಿ ರೂ.) ಸಂಪತ್ತನ್ನು ಹೊಂದಿದ್ದಾರೆ. ಎಲಾನ್‌ ಮಸ್ಕ್‌ ಎರಡನೇ ಮತ್ತು ಅಮೆಜಾನ್‌ನ ಜೆಫ್‌ ಬೆಜೋಸ್‌ ಮೂರನೇ ಸ್ಥಾನದಲ್ಲಿದ್ದಾರೆ.

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಅದಾನಿ ಸಮೂಹದ ಅಧ್ಯಕ್ಷ ಗೌತಮ್‌ ಅದಾನಿ 24ನೇ ಸ್ಥಾನದಲ್ಲಿದ್ದಾರೆ. ಜನವರಿ 24ರಂದು ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆಗ ಅವರ ನಿವ್ವಳ ಮೌಲ್ಯ ಸುಮಾರು 126 ಶತಕೋಟಿ ಡಾಲರ್‌ನಷ್ಟಿತ್ತು (ಸುಮಾರು 10.33 ಲಕ್ಷ ಕೋಟಿ ರೂ.). ಅಮೆರಿಕದ ಶಾರ್ಟ್‌-ಸೆಲ್ಲರ್‌ ಹಿಂಡೆನ್‌ಬರ್ಗ್‌ ರಿಸರ್ಚ್ ಜನವರಿ 24ರಂದು ಬಿಡುಗಡೆ ಮಾಡಿದ ವರದಿಯ ನಂತರ ಅವರ ಕಂಪನಿಗಳ ಷೇರುಗಳು ದೊಡ್ಡ ಪ್ರಮಾಣದಲ್ಲಿ ಕುಸಿದವು. ಅವರ ಒಟ್ಟು ನಿವ್ವಳ ಮೌಲ್ಯ ಈಗ 47.2 ಬಿಲಿಯನ್‌ ಡಾಲರ್‌ಗೆ (ಸುಮಾರು 3.46 ಲಕ್ಷ ಕೋಟಿ ರೂ.) ಇಳಿಕೆಯಾಗಿದೆ.

Latest Indian news

Popular Stories