ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಮೇ 6ರ ಆಸುಪಾಸಿನಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಇನ್ನು ಮೂರ್ನಾಲ್ಕು ದಿನಗಳಲ್ಲಿ, ಅಂದರೆ ಮೇ 6ರ ಆಸುಪಾಸಿನಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ (Cyclon in Bay of Bengal) ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಂಗಳವಾರ (ಏ 2) ಎಚ್ಚರಿಕೆ ನೀಡಿದ್ದು, ಕರ್ನಾಟಕದ (Karnataka Rain) ವಿವಿಧ ಭಾಗಗಳಲ್ಲಿ ಮೇ 7ರ ವರೆಗೆ ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.
ಅಮೆರಿಕದ ಹವಾಮಾನ ಮುನ್ಸೂಚನೆ ಘಟಕವಾದ ಗ್ಲೋಬಲ್ ಫೋರ್ಕಾಸ್ಟ್ ಸಿಸ್ಟಮ್ (GFS) ಮತ್ತು ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಯುರೋಪಿಯನ್ ಕೇಂದ್ರ (ECMWF)ದ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ರಚನೆ ಕುರಿತ ವರದಿ ಬೆನ್ನಲ್ಲೇ ಐಎಂಡಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಐಎಂಡಿಯ ಹವಾಮಾನ ಶಾಸ್ತ್ರದ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಅವರು, ‘ಚಂಡಮಾರುತದ ಪರಿಚಲನೆ ಆರಂಭವಾದ 48 ಗಂಟೆಗಳಲ್ಲಿ ಅದರ ಪ್ರಭಾವದಿಂದಾಗಿ ಅದೇ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ರೂಪುಗೊಳ್ಳಬಹುದು. ಕೆಲವು ಹವಾಮಾನ ಮುನ್ಸೂಚನೆ ಘಟಕಗಳು ಇದು ಸೈಕ್ಲೋನ್ ಎಂದು ಸೂಚಿಸುತ್ತಿವೆ. ನಾವು ತೀವ್ರ ನಿಗಾ ಇಡುತ್ತಿದ್ದೇವೆ. ಈ ಬಗ್ಗೆ ನಿಯಮಿತವಾಗಿ ಅಪ್ಡೇಟ್ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
2023 ರ ಮೇ ಮೊದಲಾರ್ಧದಲ್ಲಿ ಯಾವುದೇ ಉಷ್ಣವಲಯದ ಚಂಡಮಾರುತವು ಬರುವ ಸಾಧ್ಯತೆ ಬಹಳ ಕಡಿಮೆ” ಎಂದು ಖಾಸಗಿ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್ ವೆದರ್ ಹೇಳಿತ್ತು. ಏಪ್ರಿಲ್‌ನಲ್ಲಿ ಭಾರತೀಯ ಸಮುದ್ರಗಳಲ್ಲಿ ಯಾವುದೇ ಚಂಡಮಾರುತದ ಬಿರುಗಾಳಿ ಕಂಡುಬಂದಿಲ್ಲ. ಸತತ ನಾಲ್ಕು ವರ್ಷಗಳಿಂದ ಏಪ್ರಿಲ್ ತಿಂಗಳಲ್ಲಿ ಉಷ್ಣವಲಯದ ಚಂಡಮಾರುತ ಸಂಭವಿಸಿಲ್ಲ ಎಂದು ಈ ಹಿಂದೆ ವರದಿ ನೀಡಿತ್ತು.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ
ಕರ್ನಾಟಕದಲ್ಲಿ ಮೇ 7ರ ವರೆಗೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು-ಮಿಂಚು ಸಹಿತ ವ್ಯಾಪಕ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಮೇ 7 ರವರೆಗೆ ಮಳೆಯಾಗಲಿದೆ.
ಬೆಂಗಳೂರು
ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇಂದೂ (ಮೇ 3) ಕೂಡ ನಗರದ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಬೆಳಗಿನ ಜಾವದಿಂದಲೇ ಮಳೆಯಾಗುತ್ತಿದೆ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಬೆಂಗಳೂರಿನ ಉತ್ತರ, ಪೂರ್ವ ಮತ್ತು ಈಶಾನ್ಯ ಭಾಗದ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ರಸ್ತೆಗಳು ಮತ್ತು ಅಂಡರ್ಪಾಸ್ಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದ್ದರು. ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.