ಬಳ್ಳಾರಿ: ಉದ್ಯಮಿ ಕೈಲಾಶ್ ವ್ಯಾಸ ಅವರ ಕಚೇರಿ ಮೇಲೆ ಎರಡು ದಿನಗಳ ಹಿಂದೆ ಬಳ್ಳಾರಿಯಲ್ಲಿ ನಡೆದ ಐಟಿ ದಾಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಸೋಮವಾರ ಹೇಳಿದ್ದಾರೆ,
ಸಾಮಾಜಿಕ ಕಾರ್ಯಕರ್ತರೊಬ್ಬರು ಮಾತನಾಡಿ, ಉದ್ಯಮಿ ಕೈಲಾಶ್ ವ್ಯಾಸ್’ಗೆ ಶ್ರೀರಾಮುಲು ಮತ್ತು ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ಆಪ್ತರಾಗಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಶ್ರೀರಾಮುಲು ಅವರು ನಿರಾಕರಿಸಿದ್ದಾರೆ.
ಜನವರಿ 13 ರಂದು, ಐಟಿ ಅಧಿಕಾರಿಗಳು ಕೈಲಾಶ್ ವ್ಯಾಸ ಅವರ ಕಚೇರಿ ಮತ್ತು ಉದ್ಯಮಗಳ ಮೇಲೆ ದಾಳಿ ನಡೆಸಿದ್ದರು. ವ್ಯಾಸ ಅವರ ಮನೆ ಮತ್ತು ಕಚೇರಿಗಳಲ್ಲಿನ ಎಲ್ಲಾ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಅಧಿಕಾರಿಗಳು ಈತನಿಗೆ ಕೆಲವು ರಾಜಕಾರಣಿಗಳ ನಂಟು ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಶ್ರೀರಾಮುಲು, ಸುರೇಶ್ ಬಾಬು ಮತ್ತು ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಈತನ ಕಂಪನಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಶ್ರೀರಾಮುಲು ಅವರು, ಬಳ್ಳಾರಿಯಲ್ಲಿ ನಡೆದ ಐಟಿ ದಾಳಿಗೂ ನನಗೂ ಸಂಬಂಧವಿಲ್ಲ. ನನ್ನ ಹೆಂಡತಿಯ ಕಂಪನಿಯಲ್ಲಿ ನಾನು ಷೇರುಗಳನ್ನು ಹೊಂದಿದ್ದೇನೆ ಅದು ಕಾನೂನುಬದ್ಧವಾಗಿದೆ. ನಾನು ಸಮಯಕ್ಕೆ ಸರಿಯಾಗಿ ಐಟಿ ರಿಟರ್ನ್ಗಳನ್ನು ಸಲ್ಲಿಸುತ್ತೇನೆ ಮತ್ತು ಬಳ್ಳಾರಿಯಲ್ಲಿನ ಎಲ್ಲಾ ಐಟಿ ದಾಳಿಗಳನ್ನು ನನಗೆ ಲಿಂಕ್ ಮಾಡಬಾರದು ಎಂದು ತಿಳಿಸಿದ್ದಾರೆ.
‘ಕಾಂಗ್ರೆಸ್ ನಾಯಕರ ಮನೆ ಮೇಲಿನ ದಾಳಿ ರಾಜಕೀಯ ಪ್ರೇರಿತ’
ಈ ನಡುವೆ ಕಾಂಗ್ರೆಸ್ ಮುಖಂಡ ಹಾಗೂ ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಅವರ ನಿವಾಸದ ಮೇಲೆ ಸೋಮವಾರ ನಡೆದ ಐಟಿ ದಾಳಿಯನ್ನು ಸಾಮಾಜಿಕ ಕಾರ್ಯಕರ್ತ ಅಫ್ಜಲ್ ಪಾಷಾ ಖಂಡಿಸಿದ್ದು, ಈ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.
ಚುನಾವಣೆಗಳು ಹತ್ತಿರದಲ್ಲಿರುವಾಗ ಐಟಿ ದಾಳಿಗಳು ಸಾಮಾನ್ಯವಾಗಿದೆ. ಈ ದಾಳಿಯು ಮುಸ್ಲಿಂ ಯುವಕರ ರಾಜಕೀಯ ಬೆಳವಣಿಗೆಯನ್ನು ತಡೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಈ ಐಟಿ ದಾಳಿಗಳಿಂದ ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸಲು ಪ್ರಭಾವಿ ರಾಜಕಾರಣಿಗಳು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪಾಷಾ ಹೇಳಿದ್ದಾರೆ.