ವಿಜಯಪುರ : ಚುನಾವಣೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ ಅಭ್ಯರ್ಥಿಗಳು, ಕಾರ್ಯಕರ್ತರು ಈಗ ಕೊಂಚ ನಿರಾಳರಾಗಿದ್ದಾರೆ. ಆದರೆ ವಿಶ್ರಾಂತಿಗೆ ಜಾರದೇ ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದಾರೆ.
ಕುಟುಂಬ, ವೈಯುಕ್ತಿಕ ಕೆಲಸ, ವ್ಯವಹಾರ ಎಲ್ಲವನ್ನೂ ಬದಿಗಿರಿಸಿ ಚುನಾವಣೆಯಲ್ಲಿಯೇ ಹಗಲು-ರಾತ್ರಿ ತೊಡಗಿಸಿಕೊಂಡಿದ್ದ ಅಭ್ಯರ್ಥಿಗಳಲ್ಲಿ ಬಹುತೇಕ ಅಭ್ಯರ್ಥಿಗಳು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು ಕುಟುಂಬ ಸದಸ್ಯರ ಜೊತೆ ಕಾಲ ಕಳೆದಿದ್ದಾರೆ. ಇನ್ನೂ ಅಭ್ಯರ್ಥಿಗಳ ಕುಟುಂಬ ಸದಸ್ಯರು ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೂ ಅವರು ಸಹ ಇಂದು ಮನೆಯ ಚಟುವಟಿಕೆಗಳಲ್ಲಿ ಸಕ್ರೀಯರಾದರು. ಇನ್ನೂ ಕೆಲವು ಅಭ್ಯರ್ಥಿಗಳು ದೇವಾಲಯಗಳಿಗೆ ತೆರಳಿ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡಿದ್ದೂ ಇದೆ.
ಕಳೆದೊಂದು ತಿಂಗಳುಗಳಿಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಅವರ ಪತ್ನಿ ಆಶಾ ಪಾಟೀಲ, ಪುತ್ರ ರಾಹುಲ್ ಪಾಟೀಲ, ಸಹೋದರ ಸುನೀಲಗೌಡ ಪಾಟೀಲ ಪ್ರಚಾರದಲ್ಲಿಯೇ ಬ್ಯೂಸಿಯಾಗಿದ್ದರು. ಆದರೆ ಇಂದು ಆಶಾ ಪಾಟೀಲರು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು ಮನೆಯಲ್ಲಿ ಅಡುಗೆ ಮಾಡಿ ಕುಟುಂಬ ಸದಸ್ಯರಿಗೆ ಉಣಬಡಿಸಿದರು.
ಆದರೆ ಎಂ.ಬಿ. ಪಾಟೀಲರು ಮಾತ್ರ ಕಾರ್ಯಕರ್ತರೊಂದಿಗೆ ಸಮಾಲೋಚನೆ, ದೈನಂದಿನ ಚಟುವಟಿಕೆಗಳಲ್ಲಿ ಯಥಾವತ್ತಾಗಿ ತೊಡಗಿಸಿಕೊಂಡರು.
ಬಬಲೇಶ್ವರ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲರು ಚುನಾವಣೆಯ ನಂತರ ಕಾರ್ಯಕರ್ತರೊಂದಿಗೆ ಸಮಾಲೋಚನೆಯಲ್ಲಿ ಮಗ್ನರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು ಚುನಾವಣೆ ಭರಾಟೆ, ಮತದಾನದ ಹೊಣೆಗಾರಿಕೆಯನ್ನು ಮುಗಿಸಿಕೊಂಡು ಬೆಳಿಗ್ಗೆಯೇ ಸಿಂದಗಿಯ ಮನೆಯಲ್ಲಿ ಕಾರ್ಯಕರ್ತರ ಜೊತೆಗೂಡಿ ಚುನಾವಣೆ ಸಮೀಕ್ಷೆಯ ಕುರಿತು ಮಾತುಕತೆ ನಡೆಸಿದರು.
ಜೆಡಿಎಸ್ ಅಭ್ಯರ್ಥಿ ವಿಶಾಲಾಕ್ಷಿ ಪಾಟೀಲ ಅವರ ಚುನಾವಣೆಯ ಕಾರ್ಯಚಟುವಟಿಕೆಯನ್ನು ಪೂರ್ಣಗೊಳಿಸಿ, ಕಾರ್ಯಕರ್ತರೊಂದಿಗೆ ಚುನಾವಣೆಯ ಸಮೀಕ್ಷೆ ವಿವರಗಳನ್ನು ಕಲೆ ಹಾಕಿದರೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಸಹ ತಮ್ಮ ನಿವಾಸದಲ್ಲಿ ಕಾರ್ಯಕರ್ತರೊಂದಿಗೆ ಬಿರುಸಿನ ಚರ್ಚೆ ನಡೆಸಿದರು.
ಬಸವನ ಬಾಗೇವಾಡಿ ಕ್ಷೇತ್ರದಾದ್ಯಂತ ಸಂಚರಿಸಿದ ಎಸ್.ಕೆ. ಬೆಳ್ಳುಬ್ಬಿ ಈಗ ತಮ್ಮ ಕೊಲ್ಹಾರ ನಿವಾಸಕ್ಕೆ ಆಗಮಿಸಿ ವಿಶ್ರಾಂತಿ ಪಡೆದು, ನಂತರ ಕಾರ್ಯಕರ್ತರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲರು ಸಹ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನ ಮದುವೆ ಸಮಾರಂಭಗಳಿಗೆ ಭೇಟಿ ನೀಡಿದ್ದರೆ, ಜೆಡಿಎಸ್ ಅಭ್ಯರ್ಥಿ ಅಪ್ಪುಗೌಡ ಪಾಟೀಲ ಮನಗೂಳಿ ಮನಗೂಳಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ.
ಸ್ಟಾರ್ ಕ್ಯಾಂಪೇನರ್ ಆಗಿ ಸರಿಸುಮಾರು 40 ಕ್ಕೂ ಹೆಚ್ಚು ಕಡೆ ಪ್ರವಾಸ ನಡೆಸಿದ ಯತ್ನಾಳರು ಕುಟುಂಬಕ್ಕೆ ಸಮಯ ನೀಡಿದ್ದೆ ಕಡಿಮೆ, ಚುನಾವಣೆಯ ಮುಗಿದ ನಂತರ ಮನೆಗೆ ತೆರಳಿ ಕೆಲಕಾಲ ಕುಟುಂಬ ಸದಸ್ಯರೊಡನೆ ಕಾಲ ಕಳೆದು ನಂತರ ಕಗ್ಗೋಡದ ಗೋಶಾಲೆಗೆ ತೆರಳಿ ಗೋಮಾತೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ವಿಜಯಪುರ ನಗರ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಎಂದಿನಂತೆ ಬೆಳಿಗ್ಗೆಯೇ ತಮ್ಮ ಪ್ರಚಾರ ಕಾರ್ಯಾಲಯದಲ್ಲಿ ಕಾರ್ಯಕರ್ತರೊಡನೆ, ಒಡನಾಡಿಗಳೊಂದಿಗೆ ಚರ್ಚೆಗೆ ಅಣಿಯಾಗಿದ್ದಾರೆ.
ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಚುನಾವಣೆ, ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು ಮನೆಯಲ್ಲಿಯೇ ಕುಟುಂಬ ಸದಸ್ಯರೊಡನೆ ಕಾಲ ಕಳೆಯುತ್ತಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್. ನಾಡಗೌಡ ಕುಟುಂಬ ಸಮೇತರಾಗಿ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿದ್ದಾರೆ.
ಕಾರ್ಯಕರ್ತರು ಸಹ ಕೆಲವೊಬ್ಬರು ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಪ್ರವಾಸಕ್ಕೆ ತೆರಳಿದ್ದರೆ, ಇನ್ನೂ ಕೆಲವರು ರಿಸಲ್ಟ್ ಬಂದ ಮೇಲೆಯೇ ಹೋಗೋಣ ಅಲ್ಲಿಯವರೆಗೆ ಕಾಯೋಣ ಎಂದು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ.