ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ 2023ರ ಮೊದಲ ಟೆಸ್ಟ್ ಪಂದ್ಯ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಿತು. ಇದರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಮತ್ತು 132 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ 4 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣ ಸೋತಿದೆ. ಬೌಲಿಂಗ್‌ನಲ್ಲಾಗಲೀ ಅಥವಾ ಬ್ಯಾಟಿಂಗ್‌ನಲ್ಲಾಗಲೀ ಆಸ್ಟ್ರೇಲಿಯಾ ತನ್ನ ಶಕ್ತಿಯನ್ನು ತೋರಿಸಲು ಸಾಧ್ಯವಾಗಲಿಲ್ಲ. ಪಂದ್ಯ ಸಂಪೂರ್ಣವಾಗಿ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡದ ಕೈಯಲ್ಲಿತ್ತು. ಅದೇ ಸಮಯದಲ್ಲಿ, ಈ ದೊಡ್ಡ ಗೆಲುವಿನ ನಂತರ, ಅಭಿಮಾನಿಗಳು ಟೀಮ್ ಇಂಡಿಯಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊಗಳುತ್ತಿದ್ದರೆ ಆಸ್ಟ್ರೇಲಿಯಾವನ್ನು ತೆಗೆಳುತ್ತಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಇನ್ನು ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್‌ನಿಂದಾಗಿ ಕಾಂಗರೂ ತಂಡ 177 ರನ್‌ಗಳಿಗೆ ಕುಸಿಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಜಡೇಜಾ 5 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ 1-1 ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ರೋಹಿತ್ ಶರ್ಮಾ ಅವರ ಶತಕ (120), ಜಡೇಜಾ ಮತ್ತು ಅಕ್ಷರ್ ಅವರ ಅರ್ಧಶತಕಗಳ ನೆರವಿನಿಂದ 400 ರನ್ ಗಳಿಸಿ, 223 ರನ್ ಮುನ್ನಡೆ ಸಾಧಿಸಿತು. ಹೀಗಿರುವಾಗ ಪಂದ್ಯದ ಮೂರನೇ ದಿನ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಸ್ಪಿನ್‌ನ ಮುಂದೆ ಮುಗ್ಗರಿಸಿತು. ಅಶ್ವಿನ್ 5 ವಿಕೆಟ್ ಪಡೆದು ತಲ್ಲಣ ಮೂಡಿಸಿದರು. ಆಸ್ಟ್ರೇಲಿಯ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 91 ರನ್ ಗಳಿಸಿ ಆಲೌಟ್ ಆಗಿತ್ತು. ಇದರಿಂದಾಗಿ ಭಾರತ ಇನ್ನಿಂಗ್ಸ್ ಮತ್ತು 132 ರನ್‌ಗಳ ಜಯ ಸಾಧಿಸಿತು.