ಲಖನೌ: ಸೇನಾ ನೇಮಕಾತಿಗಾಗಿ ಅಗ್ನಿಪಥ್ ಯೋಜನೆ ಯುವಕರಿಗೆ ಮಾಡಿದ ಅವಮಾನ ಎಂದು ಸಮಾಜವಾದಿ ಪಕ್ಷದ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಅಗ್ನಿವೀರ್‌ನ ಪ್ರಯೋಜನಗಳು ಏನೇನು ಎಂದು ಎಣಿಕೆ ಮಾಡುವ ಬದಲು ಬಿಜೆಪಿ ಸದಸ್ಯರಿಗೆ ತಮ್ಮ ಎಷ್ಟು ಮಂದಿ ಮಕ್ಕಳನ್ನು ಅಗ್ನಿಪಥ್ ಗೆ ಕಳುಹಿಸುತ್ತಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಅಖಿಲೇಶ್ ಸವಾಲು ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯಾದವ್, ‘ಬಿಜೆಪಿ ತನ್ನ ಬೆಂಬಲಿಗರನ್ನು ‘ಅಗ್ನಿವೀರ್’ನ ಪ್ರಯೋಜನಗಳನ್ನು ಎಣಿಸಲು ಪ್ರಯತ್ನಿಸುತ್ತಿರುವ ರೀತಿಯಲ್ಲಿ ಈ ಯೋಜನೆಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ತನ್ನ ಸದಸ್ಯರ-ಬೆಂಬಲಿಗರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದರೆ ಉತ್ತಮ. ಪ್ರವಚನ ಮಾಡುವುದಕ್ಕಿಂತ ಬಿಜೆಪಿಗೆ ಮಾದರಿಯಾಗುವುದು ಒಳ್ಳೆಯದು. ಬಿಜೆಪಿ ಯುವಕರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸೇನಾ ನೇಮಕಾತಿಗಾಗಿ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ದೇಶದ ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಎಸ್‌ಪಿ ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಈ ಅಲ್ಪಾವಧಿಯ ಯೋಜನೆಯನ್ನು ಯುವಕರ ಭವಿಷ್ಯದ ಜೊತೆ ಚೆಲ್ಲಾಟ ಎಂದು ಕರೆದಿವೆ. ಮತ್ತೊಂದೆಡೆ, ಅಗ್ನಿಪಥ ಯೋಜನೆ ವಿರುದ್ಧ ಹಿಂಸಾತ್ಮಕವಾಗಿ ಪ್ರತಿಭಟಿಸುವವರಿಗೆ ಅಗ್ನಿಪಥದಲ್ಲಿ ನೇಮಕ ಆಗಲು ತೊಂದರೆಯಾಗಲಿದೆ ಎಂದು ಸೇನೆ ಹೇಳಿದೆ.