ಬೆಂಗಳೂರು: ಸಂಸದೀಯ ಮಂಡಳಿ ಸಭೆಗೆ ದಿನಾಂಕ ನಿಗದಿಯಾಗುವುದರೊಂದಿಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಒಂದು ಹಂತಕ್ಕೆ ಬಂದು ತಲುಪಿದೆ. ಮೂರ ರಿಂದ ನಾಲ್ವ ರು ಸಚಿವರೂ ಸೇರಿದಂತೆ 32 ಮಂದಿ ಶಾಸಕರು ಈ ಬಾರಿ ಟಿಕೆಟ್ ಕಳೆದುಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ. ಇದರೊಂದಿಗೆ ರಾಜ್ಯದಲ್ಲೂ “ಗುಜರಾತ್ ಮಾದರಿ’ಯೊಂದಿಗೆ ಬಿಜೆಪಿ ಚುನಾವಣ ಆಖಾಡಕ್ಕೆ ಇಳಿಯಲು ಮುಂದಾಗಿದೆ.
ಎಲ್ಲ ಕ್ಷೇತ್ರಗಳಿಗೂ ತಲಾ ಮೂವರು ಸಂಭಾವ್ಯರ ಹೆಸರು ಕೊಡಿ ಎಂದು ವರಿಷ್ಠರು ಸೂಚನೆ ನೀಡಿದಾಗಲೇ ಹಲವು ಶಾಸಕರು ತಮಗೆ ಟಿಕೆಟ್ ಕೈ ತಪ್ಪುವುದು ನಿಶ್ಚಿತ ಎಂಬ ನಿರ್ಧಾರಕ್ಕೆ ಬಂದಿದ್ದರು. ಸಂಭಾವ್ಯರ ಪಟ್ಟಿಯಲ್ಲೂ ಕೆಲವರ ಹೆಸರು ಕೈ ಬಿಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಒಟ್ಟಾರೆಯಾಗಿ 32 ಶಾಸಕರು ತಮ್ಮ ಸ್ಥಾನ ಕಳೆದುಕೊಳ್ಳುವುದು ನಿಚ್ಚಳ ಎನ್ನಲಾಗಿದೆ. ಈ ಪೈಕಿ ಮೂರರಿಂದ ನಾಲ್ಕು ಸಚಿವರೂ ಇದ್ದಾರೆ ಎಂಬುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಆಡಳಿತ ವಿರೋಧಿ ಅಲೆಯ ವಿರುದ್ಧ ಈಜುವುದಕ್ಕಾಗಿ ಹೊಸಮುಖಗಳನ್ನು ಕಣಕ್ಕಿಳಿಸುವುದು ಅನಿವಾರ್ಯ.
ದಕ್ಷಿಣ ಕನ್ನಡ ಜಿಲ್ಲೆಯ ಮೂವರು, ಉಡುಪಿ ಜಿಲ್ಲೆಯ ನಾಲ್ವರು, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವುದು ನಿಶ್ಚಿತ ಎನ್ನಲಾಗಿದೆ. ಈ ಪೈಕಿ ಕೆಲ ಘಟಾನುಘಟಿಗಳ ಹೆಸರೂ ಸೇರಿವೆ. ಕಾರ್ಯಕರ್ತರ ವಲಯದಿಂದ ವ್ಯಕ್ತವಾದ ಬಲವಾದ ವಿರೋಧವೇ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ. ಕಳೆದ ಚುನಾವಣೆ ಸಂದರ್ಭ ಬದಲಾವಣೆಗೆ ಸಾಕ್ಷಿಯಾಗಿದ್ದ ಕರಾವಳಿಯ 3 ಜಿಲ್ಲೆಗಳಲ್ಲೇ 9 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ ಖಚಿತವಾಗಿದೆ. ಸಂಭಾವ್ಯ ಶಾಸಕರ ಪಟ್ಟಿ ಈಗಾಗಲೇ ವರಿಷ್ಠರ ಕೈಯಲ್ಲಿ ಇದೆ ಎನ್ನಲಾಗಿದೆ.