ವಿಜಯಪುರ : ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆಯಾದ ಸಂಭ್ರಮವನ್ನು ಅವರ ಪುತ್ರ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಂಭ್ರಮಿಸಿದ್ದು ಗೂಂಡಾಗಿರಿಯ ಪರಮಾವಧಿಯಾಗಿದೆ, ಪಿಸ್ತೂಲ್ ನೀಡಿರುವುದು ಆತ್ಮರಕ್ಷಣೆಗಾಗಿ ಹೊರತು ಗಾಳಿಯಲ್ಲಿ ಗುಂಡು ಹಾರಿಸಲು ಅಲ್ಲ, ಈ ಬಗ್ಗೆ ಸಮಗ್ರವಾಗಿ ತನಿಖೆಯಾಗಬೇಕು ಎಂದು ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ದೂರಿದರು.
ಬಿಜೆಪಿ ಟಿಕೇಟ್ ಘೋಷಣೆಯಾದ ಸಂದರ್ಭದಲ್ಲಿ ಬಬಲೇಶ್ವರದ ಬಿಜೆಪಿ ಅಭ್ಯರ್ಥಿಯ ಪುತ್ರ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಕ್ಲಿಪ್ಪಿಂಗ್‌ಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಚುನಾವಣೆ ಘೋಷಣೆಯಾದಾಗ ಪಿಸ್ತೂಲ್, ಗುಂಡುಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಬೇಕು, ಪಿಸ್ತೂಲ್ ಇರುವುದು ಅತ್ಮರಕ್ಷಣೆಗಾಗಿ, ಈ ಕಾರಣಕ್ಕಾಗಿಯೇ ಸರ್ಕಾರ ಲೈಸನ್ಸ್ ನೀಡುತ್ತದೆ, ಆದರೆ ಅದನ್ನು ಬಿಟ್ಟು ಗಾಳಿಯಲ್ಲಿ ಗುಂಡು ಹಾರಿಸಲು ಪಿಸ್ತೂಲ್ ನೀಡಲಾಗಿಲ್ಲ. ಈ ಬಗ್ಗೆ ಪೊಲೀಸ ಮಹಾ ನಿರ್ದೇಶಕರು, ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದಿದ್ದನ್ನು ಸಂಭ್ರಮಿಸಿದ ಪರಿ ನೋಡಿದರೆ ಬಿಜೆಪಿ ಅಭ್ಯರ್ಥಿ ವ್ಯಕ್ತಿತ್ವ ಅರಿವಾಗುತ್ತದೆ, ಈ ರೀತಿಯಾದ ಹಿನ್ನೆಲೆಯ ವ್ಯಕ್ತಿಗೆ ಬಿಜೆಪಿ ಟಿಕೇಟ್ ನೀಡಿದೆ, ಯಕ್ಷಗಾನ ಮಾದರಿಯಲ್ಲಿ ಟೀಕಿಸುವ ಬಿಜೆಪಿ ರಾಜ್ಯಾಧ್ಯಕ್ಷರು ಇದಕ್ಕೆ ಉತ್ತರಿಸಬೇಕು, ಇದು ನಿಮ್ಮ ಸಂಸ್ಕೃತಿಯೇ ಎಂದು ಬಬಲೇಶ್ವರ ಪ್ರಶ್ನಿಸಿದರು.
ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮೊಸಳೆ ಕಣ್ಣೀರು ಹಾಗೂ ಅಭಿವೃದ್ಧಿ ನಡುವೆ ಹೋರಾಟ ನಡೆಯುತ್ತಿದೆ, ರೈತರ ಕಣ್ಣೀರು ಒರೆಸಿ ಅವರಲ್ಲಿ ಆನಂದಭಾಷ್ಪ ಮೂಡಿಸಿದ್ದು ಎಂ.ಬಿ. ಪಾಟೀಲರು ಎಂದರು. ಅತೀ ವಿನಯಂ ಚೋರ ಲಕ್ಷöಣಂ ಎನ್ನುವಂತೆ ಬಿಜೆಪಿ ಅಭ್ಯರ್ಥಿ ತೆರೆಯ ಹಿಂದಿನ ವ್ಯಕ್ತಿತ್ವ ಎಲ್ಲರಿಗೂ ಗೊತ್ತಿದೆ ಎಂದರು.
ಬಿಹಾರ್ ಮಾದರಿ ನಡೆಯಲ್ಲ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿ, ಬಿಜೆಪಿಯಿಂದ ಸ್ಪರ್ಧೆ ಮಾಡಿದ ವ್ಯಕ್ತಿ ಬಿಹಾರ ಮಾದರಿಯಲ್ಲಿ ಗೂಂಡಾಗಿರಿಗೆ ಇಳಿದಿದ್ದು, ತಮ್ಮ ಪರವಲ್ಲದ ಮತದಾರರನ್ನು ಫೋನ್ ಮೂಲಕ ಬೆದರಿಸುವ ಕೆಲಸ ಮಾಡುತ್ತಿದ್ದಾರೆ, ಇದು ಪ್ರಜಾತಾಂತ್ರಿಕ ವ್ಯವಸ್ಥೆಗೆ ಮಾರಕ ಎಂದರು.
ಬಿಹಾರ್ ಮಾದರಿಯಲ್ಲಿ ಹೆದರಿಸಿ, ಬೆದರಿಸಿ ಮತ ಹಾಕಿಸುವ ವ್ಯವಸ್ಥೆ ಹೋಗಿದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು, ಬಿಜೆಪಿ ಅಭ್ಯರ್ಥಿ ಗೂಂಡಾಗಿರಿ ಇಂದು ನಿನ್ನೆಯದಲ್ಲ, ತೊರವಿಯಲ್ಲಿ ಎಪಿಎಂಸಿ ಚುನಾವಣೆ ಸಂದರ್ಭದಲ್ಲಿ ದಿ.ಎಂ.ಎಲ್. ಉಸ್ತಾದ, ಬಿ.ಎಂ. ಪಾಟೀಲ, ಅಳ್ಳೊಳ್ಳಿ ವಕೀಲರು ಉಪಸ್ಥಿತರಿದ್ದ ಸಭೆಯಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಜುಗೌಡ ಪಾಟೀಲ ಅಂದು ಗುಂಡು ಹಾರಿಸಿ ಬೆದರಿಸಿದ ಇತಿಹಾಸ ಎಲ್ಲರಿಗೂ ಗೊತ್ತಿದೆ ಎಂದರು. ಜನತೆ ಮೊಸಳೆ ಕಣ್ಣೀರಿಗೆ ನಂಬಬಾರದು, ಬಬಲೇಶ್ವರ ಕ್ಷೇತ್ರದ ಜನತೆ ಮೊಸಳೆ ಕಣ್ಣೀರಿಗೆ ಮರುಳಾಗಬಾರದು ಎಂದರು.
ಗೂಂಡಾ ಸಂಸ್ಕೃತಿ ಬಿಜೆಪಿಯಲ್ಲಿ ಬಬಲೇಶ್ವರಕ್ಕೆ ಸೀಮಿತವಾಗಿಲ್ಲ, ಚಿತ್ತಾಪೂರದಲ್ಲಿ ಮಣಿಕಂಠ ರಾಠೋಡ ಚುನಾವಣೆ ಸಂದರ್ಭದಲ್ಲಿ ಪಿಸ್ತೂಲ್ ತೋರಿಸಿದ್ದು ಜಗಜ್ಜಾಹೀರಾಗಿದೆ, ವಯಸ್ಸಿಗಿಂತ ಅಧಿಕ ಅಪರಾಧಿಕ ಪ್ರಕರಣಗಳು ಅವರ ಮೇಲಿವೆ, ಈ ಸಂಸ್ಕೃತಿ ರಾಜ್ಯದೆಲ್ಲೆಡೆ ಬಿಜೆಪಿಯಲ್ಲಿ ವ್ಯಾಪಕವಾಗಿವೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ, ಕಾಂಗ್ರೆಸ್ ಪ್ರಮುಖರಾದ ವಿ.ಎಸ್. ಪಾಟೀಲ, ಸಿದ್ಧು ಗೌಡೆನ್ನವರ, ಅರ್ಜುನ ರಾಠೋಡ, ಸುರೇಶ ಗೊಣಸಗಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.