ವಿಜಯಪುರ: ಪಾಕ್ ಪರ ಘೋಷಣೆ ಕೂಗಿದ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ಬೆಂಬಲಿಗರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಕಾಂಗ್ರೆಸ್ ದೇಶ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗುತ್ತಾ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಲು ಮುಂದಾದರು, ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಮುಂದಾದಾಗ ತಳ್ಳಾಟ ಹಾಗೂ ವಾಗ್ವಾದ ಸಹ ನಡೆಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಕೆಲಕಾಲ ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿ, ಪಾಕ್ ಹೆಸರು ಸಹ ಹೇಳಲು ನಮಗೆ ಅಸಹ್ಯವಾಗುತ್ತದೆ, ಅಂತಹ ಸಂದರ್ಭದಲ್ಲಿ ನಮ್ಮ ನಾಡಿನ ಪವಿತ್ರ ಪ್ರಜಾಪ್ರಭುತ್ವ ದೇಗುಲ ವಿಧಾನಸೌಧದದಲ್ಲಿ ಪಾಕ್ ಜಿಂದಾಬಾದ್ ಎಂದು ಹೇಳಿರುವುದು ಅತ್ಯಂತ ಖಂಡನಾರ್ಹ, ಕಾಂಗ್ರೆಸ್ ಪಕ್ಷ ತೀರಾ ಲಜ್ಜಗೆಟ್ಟಿದೆ, ದೇಶಭಕ್ತಿ ಸಹ ಆ ಪಕ್ಷಕ್ಕೆ ಇಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಪಾಕಿಸ್ತಾನಿ ಏಜೆಂಟನಂತೆ ಕಾಂಗ್ರೆಸ್ ನಾಯಕರು ವರ್ತಿಸುತ್ತಿದ್ದಾರೆ, ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಹೊರಹಾಕಿದ್ದು, ಅವರ ತಮ್ಮ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಮಂಗಳೂರು ಕುಕ್ಕರ್ ಪ್ರಕರಣದಲ್ಲಿ ಆರೋಪಿಗಳನ್ನೇ ತಮ್ಮ `ಬ್ರದರ್’ ಎಂದು ಹೇಳಿರುವುದು, ಈಗ ವಿಜಯೋತ್ಸವದಲ್ಲಿ ಪಾಕ್ ಪರ ಘೋಷಣೆ ನೋಡಿದರೆ ಒಂದು ರೀತಿ ಅಸಹ್ಯಕರವಾಗಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಭಾರತ ಭೂಮಿ ಪರಮ ಪವಿತ್ರ, ಈ ಭೂಮಿಯಲ್ಲಿದ್ದುಕೊಂಡು ಅನ್ಯ ಅದು ಪಾಕ್ ಜಿಂದಾಬಾದ್ ಎಂದು ಹೇಳಿದವರಿಗೆ ಕಠಿಣಾತೀಕಠಿಣ ಶಿಕ್ಷೆ ನೀಡಬೇಕು, ಉಗ್ರ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಹೂಗಾರ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿದರು.
ಶಂಕರ ಹೂಗಾರ, ಮಂಜುನಾಥ ಮಿಸೆ, ಬಸವರಾಜ ಬಿರಾದಾರ, ಪ್ರೇಮಾನಂದ ಬಿರಾದಾರ, ಕಿರಣ್ ಪಾಟೀಲ್, ರಾಜೇಶ ತವಸೆ, ಮಹೇಶ್ ಒಡಿಯರ್, ಚಿದಾನಂದ ಚಲವಾದಿ, ಶ್ರೀಕಾಂತ ಶಿಂಧೆ, ವಿಜಯ್ ಜೋಶಿ, ಚಂದ್ರು ಚೌದ್ರಿ, ಪಾಪುಸಿಂಗ ರಜಪೂತ, ಸಂತೋಷ ಕುಬದಡ್ಡಿ, ಆನಂದ್ ಮುಚ್ಚಂಡಿ, ರಾಮಚಂದ್ರ ಚವ್ಹಾಣ, ಪ್ರಶಾಂತ ಅಗಸರ, ಪರಶುರಾಮ್, ನಾಗೇಶ್, ರವಿ ಚವ್ಹಾಣ, ಪ್ರೇಮ್ ಬಿರಾದಾರ್, ದಶರಥ ಕಾಂಬಳೆ, ವಿಠ್ಠಲ ನಡುವಿನಕೆರೆ, ಜಗದೀಶ್ ಮುಚ್ಚಂಡಿ, ವಿನಾಯಕ್ ಗೌಳಿ, ಸತಾರ್ ಕೋಲಾರ್, ಸಚಿನ್ ಕುಮ್ಸಿ, ವಿನೋದ ಮಣೂರ, ವಿನೋದ ತೆಲಸಂಗ, ಸಚಿನ ಬಂಬಳೆ, ಸಂತೋಷ ಕುರದಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.