ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರವರನ್ನು ಮತ್ತೊಮ್ಮೆ ರಾಜ್ಯಸಭೆಗೆ ಆಯ್ಕೆ ಮಾಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಅಭ್ಯರ್ಥಿಗಳ ಆಯ್ಕೆ ಆಯಾ ಪಕ್ಷದ ಆಂತರಿಕ ವಿಚಾರ. ಆದರೆ ರಾಜ್ಯದಿಂದ ಆಯ್ಕೆಯಾಗಿ ಈಗಾಗಲೇ ಸಚಿವೆಯಾಗಿರೋ ನಿರ್ಮಲಾ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಯೇನು? ನಿರ್ಮಲಾರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳಿಸುವ ಅವಶ್ಯಕತೆ ಏನಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಸಚಿವೆಯೂ ಆಗಿರುವ ನಿರ್ಮಲಾ ಸೀತಾರಾಮನ್ 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5495 ಕೋಟಿ ರೂ. ಅನುದಾನಕ್ಕೂ ಕತ್ತರಿ ಹಾಕಿದ್ದಾರೆ. ಅತ್ತ ರಾಜ್ಯಕ್ಕೆ ಬರಬೇಕಿರುವ ಜಿಎಸ್ ಟಿ ಬಾಕಿಯ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇಂತಹವರನ್ನು ರಾಜ್ಯದಿಂದ ಆಯ್ಕೆ ಮಾಡಿದರೆ ರಾಜ್ಯಕ್ಕೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ಉಂಡ ಮನೆಗೆ ದ್ರೋಹ ಎಸಗುವ ಕುತ್ಸಿತ ಬುದ್ದಿಯ ನಿರ್ಮಲಾರನ್ನು ಮತ್ತೊಮ್ಮೆ ರಾಜ್ಯಸಭೆಗೆ ಕಳಿಸುವ ರಾಜ್ಯ ಬಿಜೆಪಿ ನಾಯಕರ ನಿರ್ಧಾರ ರಾಜ್ಯದ್ರೋಹದ ಕೆಲಸ. ರಾಜ್ಯ ಬಿಜೆಪಿ ನಾಯಕರು ಗತಿಯಿಲ್ಲದೆ, ಮತಿಯಿಲ್ಲದ ನಿರ್ಮಲಾರನ್ನು ರಾಜ್ಯಸಭೆಗೆ ಕಳಿಸಲು ಹೊರಟಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಬೂಟು ನೆಕ್ಕುವ ಬದಲು ರಾಜ್ಯಕ್ಕೆ ಉಪಕಾರ ಮಾಡುವವರನ್ನು ಆರಿಸಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.