“ಬಿಜೆಪಿ ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತತೆಯನ್ನು ಕಿತ್ತು ಹಾಕಿದೆ” | “ಜೆಡಿಎಸ್ ತನ್ನ ಹೆಸರಿನಲ್ಲಿದ್ದ ಜಾತ್ಯಾತೀತತೆಯನ್ನು ಕಿತ್ತು ಹಾಕಿದೆ” – ಕಾಂಗ್ರೇಸ್

ಬೆಂಗಳೂರು: ಬಿಜೆಪಿ ಸಂವಿಧಾನದ ಪೀಠಿಕೆಯಿಂದ ಜಾತ್ಯಾತೀತತೆಯನ್ನು ಕಿತ್ತು ಹಾಕಿದೆ. ಜೆಡಿಎಸ್ ತನ್ನ ಹೆಸರಿನಲ್ಲಿದ್ದ ಜಾತ್ಯಾತೀತತೆಯನ್ನು ಅನಧಿಕೃತವಾಗಿ ಕಿತ್ತು ಹಾಕಿದೆ ಎಂದು ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,  ಜೆಡಿಎಸ್ ನಲ್ಲಿನ ಅಲ್ಪಸಂಖ್ಯಾತ ಮುಖಂಡರು ಪಕ್ಷದ ಹೊಸಿಲಿನ ಹೊರಗೆ ಕಾಲಿಟ್ಟಿದ್ದಾರೆ, ಜೆಡಿಎಸ್ ಪಕ್ಷವನ್ನು ಮುಗಿಸಲೆಂದೇ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯ ಕನಸು ನನಸಾಗುವ ಕಾಲ ಬಂದಿದೆ! ಕರ್ನಾಟಕದ ಪಾಲಿಗೆ ಇನ್ನು ಜಾತ್ಯಾತೀತ ತತ್ವದ ಜೆಡಿಎಸ್ ಮುಗಿದ ಅಧ್ಯಾಯ!

ಈ ಮೈತ್ರಿ ಯಾರ “ಸಂತೋಷ”ಕ್ಕೆ ಬಿಜೆಪಿ ? ಬಿಜೆಪಿಯ ಅಗೋಚರ ಸರ್ವಾಧಿಕಾರಿ  ಬಿಎಲ್ ಸಂತೋಷ್ ಅವರ ಮೇಲೆ ಹಿಗ್ಗಾಮುಗ್ಗಾ ಮಾತಿನ ದಾಳಿ ಮಾಡಿದ್ದ ಕುಮಾರಸ್ವಾಮಿಯವರನ್ನು ಬಿಜೆಪಿ ಕ್ಷಮಿಸಿಬಿಟ್ಟಿತೇ? ಅಥವಾ ಆಗ ಆಡಿದ್ದು ಕೇವಲ ನಾಟಕವೇ? ಫ್ಯಾಮಿಲಿ ಪಾಲಿಟಿಕ್ಸ್ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ಬಿಜೆಪಿ ಈಗ ಅದೇ ಫ್ಯಾಮಿಲಿ ಪಾರ್ಟಿಯ ಮೊರೆ ಹೋಗಿದ್ದು ಯಾವ ನೈತಿಕತೆಯಲ್ಲಿ? ಎಂದು ಪ್ರಶ್ನಿಸಿದೆ.

ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೂ ಜೆಡಿಎಸ್ ಬಿಜೆಪಿಯ ಬಿ ಟೀಮ್ ಆಗಿಯೇ ವರ್ತಿಸುತ್ತಿತ್ತು, ವಿರೋಧ ಪಕ್ಷವಾಗಿದ್ದರೂ ಬಿಜೆಪಿಯ ದುರಾಡಳಿತವನ್ನು ಪ್ರಶ್ನಿಸುವ, ವಿರೋಧಿಸುವ ಕೆಲಸ ಮಾಡಿರಲೇ ಇಲ್ಲ.

ಕದ್ದು ಮುಚ್ಚಿ ಲವ್ವಿಡವ್ವಿ ಮಾಡುತ್ತಿದ್ದ ಜೆಡಿಎಸ್ ಹಾಗೂ ಬಿಜೆಪಿ ಈಗ ಅಧಿಕೃತವಾಗಿ ಹಾರ ಬದಲಿಸಿಕೊಂಡಿವೆ ಅಷ್ಟೇ. ಜೆಡಿಎಸ್ ನವರ ಕಣ್ಣೀರಿನಂತೆ ಅವರ ಜಾತ್ಯತೀತತೆಯ ಮುಖವಾಡವೂ ನಕಲಿ ಎಂದು ಕಾಂಗ್ರೆಸ್ ಛೇಡಿಸಿದೆ.

ಕೇವಲ ಕುಟುಂಬದ ಹಿತಾಸಕ್ತಿಗಾಗಿ ಜಾತ್ಯಾತೀತತೆಯನ್ನು ವಿಸರ್ಜಿಸಿರುವ ಜೆಡಿಎಸ್ ತನ್ನ ಅಲ್ಪಸಂಖ್ಯಾತ ಮತದಾರರಿಗೆ ಏನೆಂದು ಉತ್ತರಿಸುತ್ತದೆ? ಬಿಜೆಪಿಯ ಅಲ್ಪಸಂಖ್ಯಾತ ಹಾಗೂ ದಲಿತ ವಿರೋಧಿ ನೀತಿಗಳಿಗೆ ಜೆಡಿಎಸ್ ನ ಸಮ್ಮತಿಯೂ ಇದೆಯೇ?

ಹಿಂದೆ ಜೆಡಿಎಸ್ ಪಕ್ಷದಲ್ಲೇ ಇದ್ದ ಸಂಸದ ಡ್ಯಾನಿಷ್ ಅಲಿ ಅವರ ಬಗ್ಗೆ ಅತ್ಯಂತ ತುಚ್ಛವಾಗಿ ಮಾತಾಡಿದ ಬಿಜೆಪಿ ಸಂಸದನ ಮಾತನ್ನು ಜೆಡಿಎಸ್ ಕೂಡ ಅನುಮೋದಿಸುತ್ತದೆಯೇ? ಜಾತ್ಯಾತೀತ ಮತದಾರರ ಹಿತಕ್ಕಿಂತ ಕುಟುಂಬದ ಹಿತವೇ ಮುಖ್ಯವಾಯ್ತೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

 

Latest Indian news

Popular Stories