ನವದೆಹಲಿ: ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ದೆಹಲಿ ಪೊಲೀಸರು ಭಾನುವಾರ ಸಂಜೆಯಿಂದಲೇ ಭದ್ರತಾ ವ್ಯವಸ್ಥೆ ಮಾಡಿದ್ದಾರೆ.
ದೆಹಲಿ ಪೊಲೀಸರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಿದ್ದು, ಸೋಮವಾರ ಕುಸ್ತಿಪಟುಗಳ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ನಾವು ಪ್ರಕರಣವನ್ನೂ ದಾಖಲಿಸಿಕೊಂಡಿದ್ದು, ಒಬ್ಬ ಅಪ್ರಾಪ್ತ ಬಾಲಕಿ ಸೇರಿ ಪಿರ್ಯಾದುದಾರರಿಗೆ ಸೂಕ್ತ ಭದ್ರತೆಯನ್ನು ಕೈಗೊಳ್ಳಲಾಗಿದೆ.
ತನಿಖೆ ಆರಂಭಿಸಲಾಗಿದ್ದು ಶೀಘ್ರದಲ್ಲೇ ಅವರ ಹೇಳಿಕೆಗಳನ್ನು ದಾಖಲಿಸಿಕೊಂಳ್ಳಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಸಿಂಗ್ ಬಂಧನ ಆಗುವವರೆಗೂ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಇವರಲ್ಲಿ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಇದ್ದಾರೆ.
ಕುಸ್ತಿಪಟುಗಳು ಜನವರಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಇತರ ತರಬೇತುದಾರರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿ ಪ್ರತಿಭಟನೆ ನಡೆಸಿದ್ದರು. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭರವಸೆಯ ನಂತರ ತಮ್ಮ ಪ್ರತಿಭಟನೆ ಹಿಂತೆಗೆದುಕೊಂಡಿದ್ದರು. ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ಈ ವಾರ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ.