ನವದೆಹಲಿ: ನಾಳೆಯಿಂದ ನಿರಶನ ಕೈಗೊಳ್ಳುತ್ತಿರುವ ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗೆ ಕಾಂಗ್ರೆಸ್ ಎಚ್ಚರಿಕೆ ಸಂದೇಶ ರವಾನಿಸಿದೆ.
ಸಚಿನ್ ಪೈಲಟ್ ನಡೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವೆಸಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಬೇಡಿಕೆಯನ್ನು ಅಶೋಕ್ ಗೆಹ್ಲೋಟ್ ಸರ್ಕಾರದ ಮುಂದಿಟ್ಟು ನಿರಶನ ನಡೆಸಲು ಮುಂದಾಗಿರುವ ಪೈಲಟ್ ತಮ್ಮ ನಿರ್ಧಾರವನ್ನು ಸಡಿಸಲು ಒಪ್ಪುತ್ತಿಲ್ಲ.
ಸರ್ಕಾರ ನಿಷ್ಕ್ರಿಯವಾಗಿದೆ ಎಂಬ ಪೈಲಟ್ ಆರೋಪವನ್ನು ಗೆಹ್ಲೋಟ್ ಸರ್ಕಾರ ನಿರಾಕರಿಸಿದ್ದು, ಕಾಂಗ್ರೆಸ್ ನಾಯಕರಲ್ಲಿನ ಎರಡು ಬಣಗಳ ನಡುವಿನ ತಿಕ್ಕಾಟ ರಾಜ್ಯದಲ್ಲಿ ಚುನಾವಣೆಗೆ ಕೆಲವೇ ತಿಂಗಳಿರುವಾಗ ಕಾಂಗ್ರೆಸ್ ಗೆ ಮುಜುಗರ ಉಂಟುಮಾಡಿದೆ.
ನಾಳೆ ಪೈಲಟ್ ನಡೆಸುತ್ತಿರುವ ನಿರಶನ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಪಕ್ಷವಿರೋಧಿ ಚಟುವಟಿಕೆಯಾಗಿದೆ. ತಮ್ಮದೇ ಸರ್ಕಾರದ ವಿರುದ್ಧ ಯಾವುದೇ ಸಮಸ್ಯೆ ಇದ್ದಲ್ಲಿ ಅದನ್ನು ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಚರ್ಚಿಸುವ ಬದಲು ಪೈಲಟ್ ಪಕ್ಷದ ವೇದಿಕೆಗಳಲ್ಲಿ ಅದನ್ನು ಚರ್ಚಿಸಬಹುದು ಎಂದು ರಾಜಸ್ಥಾನದ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಾಂಧವ ಹೇಳಿದ್ದಾರೆ.
ನಾನು ಕಳೆದ 5 ತಿಂಗಳಿನಿಂದಲೂ ಎಐಸಿಸಿ ಉಸ್ತುವಾರಿಯಾಗಿದ್ದೇನೆ ಆದರೆ ಪೈಲಟ್ ಸರ್ಕಾರಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಯಾವ ವಿಷಯವನ್ನೂ ಚರ್ಚಿಸಿಲ್ಲ. ಈಗಲೂ ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಹಾಗೂ ಮಾತುಕತೆ ನಡೆಸುವಂತೆ ಸೂಚಿಸುತ್ತಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಅವರು ನಿರ್ವಿವಾದದ ಸ್ವತ್ತು” ಎಂದು ರವಾಂಧ ಹೇಳಿದ್ದಾರೆ.