ನವದೆಹಲಿ: ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಸಮೀಕ್ಷೆ ಕಾರ್ಯಾಚರಣೆ ಕುರಿತು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ತೆರಿಗೆ ವಂಚನೆ ತನಿಖೆಯ ಭಾಗವಾಗಿ ಆದಾಯ ತೆರಿಗೆ ಇಲಾಖೆ ದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಕಚೇರಿಗಳಲ್ಲಿ ಸಮೀಕ್ಷೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಸಿ ಕಚೇರಿಗಳಲ್ಲಿ ಐಟಿ ಇಲಾಖೆಯ ‘ಸರ್ವೇ ಕಾರ್ಯಾಚರಣೆ’ಯನ್ನು ‘ಬೆದರಿಕೆಯ ಕ್ರಿಯೆ’ ಎಂದು ಕಾಂಗ್ರೆಸ್ ಬಣ್ಣಿಸಿದ್ದು ಕೇಂದ್ರ ಸರ್ಕಾರವು ಟೀಕೆಗಳಿಗೆ ಹೆದರುತ್ತಿದೆ ಎಂದು ಹೇಳಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ‘ಬಿಬಿಸಿ ಕಚೇರಿಗಳ ಮೇಲಿನ ಐಟಿ ದಾಳಿಯು ಸರ್ಕಾರದ ಹತಾಶೆಗೆ ಕಾರಣವಾಗಿದೆ. ಅಲ್ಲದೆ ಮೋದಿ ಸರ್ಕಾರವು ಟೀಕೆಗಳಿಗೆ ಹೆದರುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
ನಾವು ಈ ಬೆದರಿಕೆ ತಂತ್ರಗಳನ್ನು ಕಠಿಣ ಪದಗಳಲ್ಲಿ ಖಂಡಿಸುತ್ತೇವೆ. ಪ್ರಜಾಸತ್ತಾತ್ಮಕವಲ್ಲದ ಮತ್ತು ಸರ್ವಾಧಿಕಾರಿ ಧೋರಣೆ ಇನ್ನು ಮುಂದೆ ಮುಂದುವರೆಯಲು ಸಾಧ್ಯವಿಲ್ಲ ಎಂದು ವೇಣುಗೋಪಾಲ್ ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, ‘ವಿನಾಶ ಕಾಲೇ ವಿಪರೀತ ಬುದ್ಧಿ’ ಎಂದು ಟ್ವೀಟ್ ಮಾಡಿದ್ದಾರೆ. ಇಲ್ಲಿ ನಾವು ಅದಾನಿ ವಿಚಾರದಲ್ಲಿ ಜೆಪಿಸಿ ಸಮಿತಿ ರಚನೆಗೆ ಬೇಡಿಕೆ ಇಡುತ್ತಿದ್ದೇವೆ. ಆದರೆ ಸರ್ಕಾರ ಬಿಬಿಸಿಯ ಬೆನ್ನು ಬಿದ್ದಿದೆ ಎಂದರು.
ಆದಾಯ ತೆರಿಗೆ ಇಲಾಖೆಯ ಸರ್ವೇಯೂ ಕಂಪನಿಯ ವ್ಯವಹಾರ ಆವರಣದಲ್ಲಿ ಮಾತ್ರ ನಡೆಸುತ್ತದೆ. ಅದರ ಸಿಇಒ ಅಥವಾ ನಿರ್ದೇಶಕರ ನಿವಾಸಗಳು ಮತ್ತು ಇತರ ಸ್ಥಳಗಳ ಮೇಲೆ ದಾಳಿ ಮಾಡುವುದಿಲ್ಲ. ಲಂಡನ್ ಪ್ರಧಾನ ಕಚೇರಿಯ ಸಾರ್ವಜನಿಕ ಪ್ರಸಾರಕ ಮತ್ತು ಅದರ ಭಾರತೀಯ ಅಂಗದ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ. ತನಿಖೆಯು BBC ಅಂಗಸಂಸ್ಥೆ ಕಂಪನಿಗಳ ಅಂತಾರಾಷ್ಟ್ರೀಯ ತೆರಿಗೆ ಸಮಸ್ಯೆಗಳಿಗೆ ಸಂಬಂಧಿಸಿದೆ ಎಂದು ಮೂಲಗಳು ಸೂಚಿಸಿವೆ.