ಬೆಂಗಳೂರು: ಕರ್ತವ್ಯ ನಿರತ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಿ ಬಿಜೆಪಿ ಕಾರ್ಪೊರೇಟರ್ ವಿ.ಬಾಲಕೃಷ್ಣನನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ವಾರ್ಡ್ ನಂಬರ್ 185 ಯಲಚೇನಹಳ್ಳಿ ವಾರ್ಡ್ ಮಾಜಿ ಕಾರ್ಪೋರೇಟರ್ ಬಾಲಕೃಷ್ಣ ಬಂಧಿತ ಆರೋಪಿ.
ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು ಕಗ್ಗಲೀಪುರ ಠಾಣೆಗೆ ತೆರಳಿದ್ದರು. ಇದೇ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿಯಾಗಿ ಕೊನೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕತ್ತಿನ ಪಟ್ಟಿ ಹಿಡಿದು ಬಾಲಕೃಷ್ಣ ಹಲ್ಲೆ ನಡೆಸಿದ್ದಾರೆ.
ತಕ್ಷಣವೇ ಬಾಲಕೃಷ್ಣನನ್ನ ವಶಕ್ಕೆ ಪಡೆದುಕೊಂಡ ಪೊಲೀಸರು, ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ನೀಡಿದ ದೂರು ಆಧರಿಸಿ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 353 ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ಐಪಿಸಿ ಸೆಕ್ಷನ್ 332 ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ವೈದ್ಯಕೀಯ ತಪಾಸಣೆ ನಡೆಸಿ ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿದ್ದು, ಇಂದು ಆರೋಪಿ ಬಾಲಕೃಷ್ಣನ ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ. ಇನ್ನು ಹೆಚ್ಚಿನ ವಿಚಾರಣೆಗಾಗಿ ಮಾಜಿ ಕಾರ್ಪೋರೇಟರ್ ಬಾಲಕೃಷ್ಣನನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.