ಬೆಂಗ​ಳೂರು-ಮೈಸೂರು ಎಕ್ಸ್ ಪ್ರೆಸ್ ವೇ ವಾಹ​ನ ಸವಾ​ರರ ಮೇಲೆ ದಂಡ – 490 ಪ್ರಕರಣ!

ಬೆಂಗಳೂರು: ಬೆಂಗ​ಳೂರು-ಮೈಸೂರು ಎಕ್ಸ್‌ ಪ್ರೆಸ್‌ ವೇನಲ್ಲಿ ಅಪ​ಘಾ​ತ​ಗ​ಳನ್ನು ನಿಯಂತ್ರಿ​ಸುವ ನಿಟ್ಟಿ​ನಲ್ಲಿ ಕಾರ್ಯೋ​ನ್ಮು​ಖ​ರಾ​ಗಿ​ರುವ ಪೊಲೀ​ಸರು ಶರ​ವೇ​ಗ​ದಲ್ಲಿ ಸಂಚ​ರಿ​ಸುವ ವಾಹ​ನ​ಗಳ ಮೇಲೆ ದಂಡಾಸ್ತ್ರ ಪ್ರಯೋ​ಗ ಮಾಡು​ತ್ತಿ​ದ್ದು, ಕೇವ​ಲ ಎರಡು ದಿನ​ಗ​ಳಲ್ಲಿ 490 ಪ್ರಕ​ರ​ಣ​ಗಳನ್ನು ದಾಖಲಿ​ಸಿ​ದ್ದಾರೆ.

ಎಕ್ಸ್‌ ಪ್ರೆಸ್‌ ವೇನಲ್ಲಿ ವಿಶೇಷ ಕಾರ್ಯಾ​ಚ​ರ​ಣೆಗೆ ಇಳಿ​ದಿ​ರುವ ಪೊಲೀ​ಸರು ಮೊದ​ಲ ದಿನವಾದ ಗುರು​ವಾರ 44 ವಾಹನ ಚಾಲ​ಕರ ವಿರುದ್ಧ ಪ್ರಕ​ರಣ ದಾಖ​ಲಿ​ಸಿ​ದ್ದರು. ಎರ​ಡನೇ ದಿನ​ವಾದ ಶುಕ್ರ​ವಾರ 446 ಪ್ರಕ​ರ​ಣ​ಗ​ಳನ್ನು ದಾಖಲು ಮಾಡಿ​ ದಂಡ ವಸೂಲಿ ಮಾಡಿದ್ದಾರೆ.

ಇದ​ರಲ್ಲಿ ಓವರ್‌ ಸ್ಪೀಡ್‌ 174 , ಲೇನ್‌ ಡಿಸಿ​ಪ್ಲೀನ್‌ ಉಲ್ಲಂಘನೆ ಮಾಡಿ​ದ್ದ​ಕ್ಕಾಗಿ 137, ಸೀಟ್‌ ಬೆಲ್ಟ್‌ ಧರಿ​ಸ​ದ ಕಾರಣಕ್ಕೆ 81, ಹೆಲ್ಮೆಟ್‌ ಧರಿ​ಸದ ಬೈಕ್‌ ಧರಿ​ಸದ ಕಾರಣ 47 ಪ್ರಕ​ರಣ ಹಾಗೂ ಇತರೆ 51 ಪ್ರಕ​ರ​ಣ ಸೇರಿ​ದಂತೆ ಒಟ್ಟಾರೆ 490 ಪ್ರಕ​ರ​ಣ​ಗಳು ಸೇರಿ​ವೆ.

ರಾಮನಗರ ಪೊಲೀಸರು ರೇಡಾರ್‌ ಗನ್‌ಗಳೊಂದಿಗೆ ಹೆದ್ದಾ​ರಿ​ಯಲ್ಲಿ ವಾಹ​ನ​ಗಳ ವೇಗ ತಪಾ​ಸ​ಣೆ​ಯಲ್ಲಿ ತೊಡಗಿದ್ದು, ಅತಿ​ವೇಗ ಮತ್ತು ಅಜಾಗ​ರೂ​ಕ​ತೆ​ಯಿಂದ ಅಡ್ಡಾ​ದಿಡ್ಡಿಯಾಗಿ ವಾಹನ ಚಾಲನೆ ಮಾಡು​ವ​ವರು, ಸೀಟ್‌ ಬೆಲ್ಟ್‌ ಧರಿ​ಸ​ದಿ​ರು​ವುದು ಸೇರಿ​ದಂತೆ ಸುರ​ಕ್ಷತಾ ಕ್ರಮ​ಗಳ ಬಗ್ಗೆ ನಿಗಾ ವಹಿ​ಸಿ​ದ್ದಾರೆ. ಅನು​ಮ​ತಿ​ಸುವ ಮಿತಿ​ಗಿಂತ ಹೆಚ್ಚಿನ ವೇಗ​ದಲ್ಲಿ ವಾಹನ ಚಲಾ​ಯಿ​ಸು​ವ​ವರ ವಿರುದ್ಧ ಕ್ರಮ ಕೈಗೊ​ಳ್ಳ​ಲಾ​ಗು​ತ್ತಿ​ದೆ.

ಕಳೆದ ಮಾರ್ಚ್‌ನಲ್ಲಿ ಬೆಂಗ​ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಲೋಕಾ​ರ್ಪ​ಣೆ​ಗೊಂಡ ನಂತರ 243 ಅಪ​ಘಾತ ಪ್ರಕ​ರ​ಣ​ಗಳು ಸಂಭ​ವಿ​ಸಿವೆ. ವರದಿಗಳ ಪ್ರಕಾರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 58 ಮಂದಿ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 64 ಮಂದಿ ಸೇರಿ ಒಟ್ಟು 122 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು.

ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾ​ಗದ ಎಡಿಜಿಪಿ ಅಲೋಕ್‌ ಕುಮಾರ್‌ ಅಪ​ಘಾತ ಸ್ಥಳ​ಗ​ಳನ್ನು ಪರಿಶೀಲನೆ ನಡೆ​ಸಿ​ದ್ದರು. ಆನಂತರ ಮೇಜರ್‌ ಸರ್ಜರಿ ಕೈಗೊಳ್ಳಲಾಗಿದ್ದು, ಎಕ್ಸ್‌ ಪ್ರೆಸ್‌ ವೇನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರೇಡಾರ್‌ ಗನ್‌ ಬಳಕೆ ಮಾಡುವುದಾಗಿ ಹೇಳಿ​ದ್ದರು.

ಹೆದ್ದಾ​ರಿ​ಯಲ್ಲಿ ಸಂಚರಿಸುವ ವಾಹನಗಳಿಗೆ 100 ಕಿ.ಮೀ.ಗರಿಷ್ಠ ವೇಗ ಮಿತಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ವಾಹನ ಚಾಲಕರು 120ರಿಂದ 160 ಕಿಮೀ ವೇಗದವರೆಗೆ ಚಾಲನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ​ನ​ಗರ ವ್ಯಾಪ್ತಿಯ ಹೆದ್ದಾ​ರಿ​ಯಲ್ಲಿ ಪೊಲೀ​ಸರು ಸ್ಪೀಡ್‌ ರೇಡಾರ್‌ ಗನ್‌ ಮೂಲಕ ಕಾರ್ಯಾ​ಚ​ರ​ಣೆಗೆ ಇಳಿ​ದಿದ್ದಾರೆ.

ಈ ರೇಡಾರ್‌ ಗನ್‌ನಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿವರವನ್ನು ಚಿತ್ರ ಸಮೇತ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದರ ಆಧಾರದ ಮೇಲೆ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್‌ ಗಳ ಸಹಾಯದಿಂದ ಅಂತಹ ವಾಹನವನ್ನು ತಡೆದು ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ.

Latest Indian news

Popular Stories