ಬೆಳಗಾವಿ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗಲು 2,500 ಕೋಟಿ ಕೇಳಿದ್ದರು ಎಂದು ಹೇಳಿದ್ದಾರೆ, ಆದರೆ ಯಾರು ಕೇಳಿದರು, ಎಲ್ಲಿಂದ ಬಂದು ಕೇಳಿದರು, ಬಿ.ಎಸ್. ಯಡಿಯೂರಪ್ಪ ಎಷ್ಟು ದುಡ್ಡು ಕೊಟ್ಟು ಸಿಎಂ ಆದರೂ ಎಂದು ಬಹಿರಂಗ ಪಡಿಸಲಿ ಮತ್ತು ಬಸವರಾಜ ಬೊಮ್ಮಾಯಿಯವರು ಎಷ್ಟು ದುಡ್ಡು ಕೊಟ್ಟರೂ ಎಂಬುವುದು ರಾಜ್ಯದ, ದೇಶದ ಜನತೆಗೆ ಗೊತ್ತಾಗಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಮ್ಮನೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡೋದು ಬೇಡ. ಸಿಎಂ ಆಗಲು ಅವರಿಗೆ ಯಾರು ದುಡ್ಡು ಕೇಳಿದ್ದಾರೆ ಅಂತಾ ಅವರನ್ನೇ ಕೇಳಿ. ನಾನು ಐದು ಪೈಸೆ ಖರ್ಚು ಮಾಡದೇ, ಯಾರಿಗೂ ಒಂದು ಕಪ್ ಚಹ ಸಹಿತ ಕುಡಿಸದೇ ನಾನು ಮುಖ್ಯಮಂತ್ರಿ ಆಗಿದ್ದೆ. ಶಾಸಕಗಾಂಗ ಪಕ್ಷದ ಸಭೆಯಲ್ಲಿ ನನ್ನ ಆಯ್ಕೆ ಮಾಡಿದ್ದರು. ಹೈಕಮಾಂಡ್ ಕೂಡ ನನ್ನನ್ನೇ ಆಯ್ಕೆ ಮಾಡಿತು’ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಭಾರತದಲ್ಲಿ 47 ಲಕ್ಷ ಜನ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಐದು ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂದು ಪ್ರಶ್ನಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ದೇಶದ ಜನತೆಗೆ ಸುಳ್ಳು ಮಾಹಿತಿ ನೀಡುವುದನ್ನು ಬಿಟ್ಟು, ಕೋವಿಡ್ ನಿಂದ ಸಾವನ್ನಪ್ಪಿದ್ದವರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಇನ್ನೂ ರಾಜ್ಯದಲ್ಲಿಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೋವಿಡ್ ನಿಂದ ಎಷ್ಟು ಜನ ಸತ್ತಿದ್ದಾರೆ ಎಂದು ಸರಿಯಾಗಿ ಮಾಹಿತಿ ನೀಡಲಿ. ಅವರ ಕುಟುಂಬಸ್ಥರಿಗೆ ಪರಿಹಾರ ನೀಡಿ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.