ಬ್ರಾಹ್ಮಣ,ಕ್ಷತ್ರಿಯ,ವೈಶ್ಯರಂತಹ ಅನುತ್ಪಾದಕ ಜಾತಿಗಳು ದಲಿತರು, ದ್ರಾವಿಡ ಸಮುದಾಯದಂತಹ ಉತ್ಪಾದಕ ಜಾತಿಗಳ ಮೇಲೆ ಆಡಳಿತ ನಡೆಸುತ್ತಿದೆ – ಸಿ.ಎಸ್ ದ್ವಾರಕನಾಥ್

ಉಡುಪಿ: ಗಣರಾಜ್ಯೋತ್ಸವದ ಪ್ರಯುಕ್ತ ಉಡುಪಿಯ ಡಾನ್ ಬಾಸ್ಕೊ ಹಾಲ್’ನಲ್ಲಿ “ಭಾರತದ ಸಂವಿಧಾನ ಮತ್ತು ಧರ್ಮ ರಾಜಕಾರಣ” ಎಂಬ ವಿಷಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿಯ, ಉಡುಪಿ ಜಿಲ್ಲೆ ವತಿಯಿಂದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.

IMG 20230126 1252071674718806770 Featured Story, Udupi

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಹಿಂದುಳಿದ ವರ್ಗದ ಮಾಜಿ ಅಧ್ಯಕ್ಷರು, ಹಿರಿಯ ವಕೀಲರಾದ ಸಿ.ಎಸ್ ದ್ವಾರಕನಾಥ್ ಮಾತನಾಡಿ, “ಸಂವಿಧಾನದ ಅಕ್ಷರವನ್ನು ಮಾತ್ರವಲ್ಲ ಅದರ ಹೃದಯವನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಸಮಯಬೇಕಾಗುತ್ತದೆ. ಸಂವಿಧಾನವನ್ನು ಅಂಬೇಡ್ಕರ್ ಬರೆಯಲಿಲ್ಲ ಎಂಬ ಅಪಪ್ರಚಾರ 1947 ರಲ್ಲೇ ಆರಂಭವಾಗಿತ್ತು. ಆರ್.ಎಸ್.ಎಸ್ ಮುಖವಾಣಿಯ ಆರ್ಗನೈಝರ್ ನಲ್ಲೂ ಅಂಬೇಡ್ಕರ್ ಬರೆಯುತ್ತಿರುವ ಸಂವಿಧಾನ “ಫ್ಲೋಟಿಂಗ್ ಸಂವಿಧಾನ” ಎಂದು ವ್ಯಂಗ್ಯ ಮಾಡಲಾಗಿತ್ತು. ಅದರಲ್ಲಿ ಯಾವುದೇ ಮನು ಶಾಸ್ತ್ರದ ಅಂಶ ಇಲ್ಲ ಎಂದು ಟೀಕಿಸಿದ್ದರು. ಆದರೆ ಸಂವಿಧಾನ ರಚನಾ ಸಮಿತಿಯ ಸಭೆಯಲ್ಲಿದ್ದ ಎಲ್ಲರ ಪ್ರಶ್ನೆಗೆ ಸಮರ್ಥವಾಗಿ ಉತ್ತರಿಸಿದ್ದರು. ಅದು ಸ್ವತಃ ಅವರು‌ ರಚಿಸಿದ ಕಾರಣಕ್ಕೆ ಸಾಧ್ಯವಾಗಿತ್ತು.ಏಳು ಜನರ ಸಮಿತಿಯಲ್ಲಿ ಅಂಬೇಡ್ಕರ್ ಒಬ್ಬರೇ ಸಕ್ರಿಯವಾಗಿ ಸಂವಿಧಾನ ಬರೆದಿದ್ದಾರೆ ಎಂದರು.

“ಇತಿಹಾಸದಲ್ಲಿ ಬಂದ ಕನಕದಾಸರ,ಬಸವಣ್ಣನವರ, ರಾಮ್ ಮನೋಹರ್ ಅವರಂತಹ ವ್ಯಕ್ತಿತ್ವಗಳ ವಿಚಾರಗಳ ಸಾರಾಂಶವನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಕಟ್ಟಿ ಕೊಟ್ಟರು. ಇವತ್ತು ಯಾರು ಯಾವ ವಿಚಾರವನ್ನು ಹೇಳಿದ್ದರೂ ಕಾನೂನಾತ್ಮಕವಾಗಿ ಅನ್ವಯಿಸಲು ಸಾಧ್ಯವಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಮಾತ್ರ ಎಂದು ಹೇಳಿದರು.

ಸಂಘಪರಿವಾರದವರು ಸಹೋದರತೆ, ಜಾತ್ಯತೀತತೆಯ ವಿರೋಧಿಗಳು. ಮೂಲತಃ ಅವರು ಜೀವ ವಿರೋಧಿಗಳು ಎಂದ ಅವರು, ಅವರ ಹಿಂದು ಧರ್ಮ ಅಂದ್ರೆ ಬ್ರಾಹ್ಮಣ ಧರ್ಮ. ಅವರ ರಾಷ್ಟೀಯತೆ ಅಂದ್ರೆ ವೈದಿಕ ಧರ್ಮವೆಂದು ನಾವು ಭಾವಿಸಬೇಕು. ಅವರು ಬಡತನ,ಜನರ ಸಮಸ್ಯೆ, ಮೂಲ ನಿವಾಸಿಗಳ ಸಂಸ್ಕೃತಿಯ ಕುರಿತು ಎಂದೂ ಮಾತನಾಡಿಲ್ಲ. ಆರ್.ಎಸ್.ಎಸ್ ನ ಹಿಂದುತ್ವ ಅಂದರೆ ಬ್ರಾಹ್ಮಣತ್ವ, ನಾವು ಅದರ ವಿರೋಧಿಗಳಾಗಿದ್ದೇವೆ ಎಂದರು.

6 ಜನರಲ್ಲಿ ಐದು ಮಂದಿ ಬ್ರಾಹ್ಮಣರು, ಒರ್ವ ಬನಿಯಾ ಸರಸಂಚಾಲಕರಾಗಿದ್ದಾರೆ. ಆದರೆ ಇದುವರೆಗೆ ಹಿಂದುಳಿದವರು, ದಲಿತರು ಸರಸಂಚಾಲಕರಾಗಿ ನೇಮಕವಾಗಿಲ್ಲ. ಅವರಿಗೆ ಬೇಕಾಗಿರುವುದು ವೈದಿಕತೆ. ಅದರ ಕುರಿತು ಮಾತನಾಡಿದರೆ ಮುಸ್ಲಿಮರ ಮೇಲೆ ಎತ್ತಿ ಕಟ್ಟಲಾಗುತ್ತದೆ ಎಂದರು.

ಭಾಬಾ ಸಾಹೇಬ್ ಸಂವಿಧಾನದಲ್ಲಿ ಧರ್ಮ ನಿರಪೇಕ್ಷತೆ ಕುರಿತು ಮಾತನಾಡಿದ್ದಾರೆ. ಈ ಸರಕಾರ ತಂದಿರುವ ಮತಾಂತರ ಕಾಯಿದೆ ಸಂವಿಧಾನ ವಿರೋಧಿ ಅಲ್ವಾ? ಕ್ರೈಸ್ತ ಸಮುದಾಯದ ಮೇಲೆ ಆರೋಪ ಹೊರಿಸುವ ಇವರಿಗೆ ಅವರ ಜನಸಂಖ್ಯೆ ಕಡಿಮೆಯಾಗುತ್ತಿರುವುದು ಕಾಣುದಿಲ್ವಾ? ಅವರು ಸುಳ್ಳು ಹೇಳಿ ಮುಂದುವರಿಯುತ್ತಿದ್ದಾರೆ. ಈ ಕಾನೂನುಗಳು ಸಂವಿಧಾನದ ಆಶಯಕ್ಕೆ ವಿರುದ್ದವಾಗಿದೆ.

ರಾಜಕೀಯದಷ್ಟೇ ಮತಾಂತರದ ಅಗತ್ಯವಿದೆ ಯೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಜಗತ್ತಿನ ಯಾವುದೇ ಧರ್ಮದಲ್ಲಿ ಜಾತೀಯತೆ, ಅಸಮಾನತೆ ಇಲ್ಲ ಕೇವಲ ಹಿಂದೂ ಧರ್ಮದಲ್ಲಿ ಮಾತ್ರವಿದೆ ಎಂದು ಅವರು ಹೇಳುತ್ತಾರೆ.

ಧರ್ಮ ನಾಶದ ಕಡೆ ಹೋಗುತ್ತಿದೆ‌. ಹೆಂಡತಿಯನ್ನು ಕೊಂದು ಹಾಕುವಷ್ಟರ ಮಟ್ಟಿಗೆ ಧರ್ಮ ಕೆಳಗೆ ಹೊರಟು ಹೋಗಿದೆ. ಮತ್ತೆ ಯಾಕೆ ಕೃಷ್ಣ ಅವತಾರ ಧರಿಸುತ್ತಿಲ್ಲ ಎಂಬುವುದು ಅಚ್ಚರಿ ಸಂಗತಿ ಎಂದು ಹೇಳಿದರು.

ಇವತ್ತು ಸಮಾಜದಲ್ಲಿ ಅನುತ್ಪಾದಕ ಜಾತಿಗಳು ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು. ಉತ್ಪಾದಕ ಜಾತಿಗಳು ಶೂದ್ರರು, ದಲಿತರು, ದ್ರಾವಿಡ ಸಮುದಾಯಗಳಾಗಿವೆ. ಅನುತ್ಪಾಕದ ಸಮುದಾಯಗಳು ಉತ್ಪಾದಕ ಸಮುದಾಯಗಳ ಮೇಲೆ ಆಡಳಿತ ನಡೆಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅದಕ್ಕಾಗಿ ಶ್ರಮ ಸಮುದಾಯಗಳು ಒಂದಾಗಿ ರಾಜಕಾರಣ ಕಟ್ಟಬೇಕೆಂದು ಕರೆ ನೀಡಿದರು.

1% ಮೇಲ್ವರ್ಗದ ಅರ್ಥಿಕ ಹಿಂದುಳಿದವರಿಗೆಂದು 10% ಸರಕಾರ ಮೀಸಲಾತಿ ನೀಡುತ್ತಿದೆ. ಇಂತಹ ಕಾನೂನನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಮೀಸಲಾತಿ ಇಲ್ಲ‌ ಅವರಿಗೆ ಸಮಸ್ಯೆ ಅರ್ಥವಾಗುತ್ತಿಲ್ಲ. ಅವರು 70 ವರ್ಷದಿಂದ ಕೊಡುತ್ತಿದ್ದೇವೆ ಇನ್ನೆಷ್ಟು ವರ್ಷ ಕೊಡಬೇಕು ಎಂದು ಪ್ರಶ್ನಿಸುತ್ತಾರೆ. 70 ವರ್ಷದ ಅನ್ಯಾಯದ ಕುರಿತು ಮಾತನಾಡುವುದಿಲ್ಲ ಎಂದರು.

EWS ಕಡ್ಡಾಯವಲ್ಲ ರಾಜ್ಯ ಸರಕಾರ ನಿರ್ಧಾರ ಕೈಗೊಳ್ಳುವ ಹಕ್ಕು ಹೊಂದಿದೆ. ಈ ಸಭೆಯ ಮೂಲಕ ews ವಿರುದ್ಧ ನಿರ್ಣಯ ಕೈಗೊಳ್ಳಲು ಕರೆ ನೀಡಿದರು.

ಪ್ರಾತಿನಿಧ್ಯ ಇರುವವರಿಗೆ ಸರ್ಕಾರ ಪ್ರಾತಿನಿಧ್ಯ ನೀಡುತ್ತದೆ. ರಾಮಮಂದಿರ ವಿಚಾರದಲ್ಲಿ ನಂಬಿಕೆಯನ್ಬು ಗೌರವಿಸಬೇಕು ಎನ್ನುವ ನ್ಯಾಯಾಲಯ ಹಿಜಾಬ್ ವಿಚಾರದಲ್ಲಿ ನಂಬಿಕೆಗಿಂತ ಫ್ಯಾಕ್ಟ್ ಮುಖ್ಯ ಎನ್ನುತ್ತದೆ ಈ ವಿರೋಧಾಭಾಸ ಯಾಕೆ ಎಂದು ಸ್ಪಷ್ಟ ಪಡಿಸಬೇಕಾಗಿದೆ. ಇದೇ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಜಾತೀಯಾಧರಿತ ಇರುವ ಅಸಮಾನತೆ ಕುರಿತು ಮಾತನಾಡಿದರು.

ಜಯನ್ ಮಲ್ಪೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸುಂದರ್ ಮಾಸ್ಟರ್ ಸ್ವಾಗತಿಸಿದರು. ದಿನಕರ್ ಬೆಂಗ್ರೆ ನಿರೂಪಿಸಿ ಧನ್ಯವಾದವಿತ್ತರು.

ಈ ಸಂದರ್ಭದಲ್ಲಿ ಐಕ್ಯ ವೇದಿಕೆಯ ಸಂಚಾಲಕರಾದ ಮಂಜುನಾಥ್, ಪ್ರೊ.ಫಣಿರಾಜ್,ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಇದ್ರಿಸ್ ಹೂಡೆ, ಶ್ಯಾಮರಾಜ್ ಬಿರ್ತಿ, ಶೇಖರ್ ಹೆಜಮಾಡಿ, ಫಾದರ್ ವಿಲಿಯಂ ಮಾರ್ಟಿಸ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Latest Indian news

Popular Stories