ಬ್ರಾಹ್ಮಣರ ಕುರಿತಾದ ಹೇಳಿಕೆಯ ಬಗ್ಗೆ ಅರ್ಚಕರ ಪ್ರಶ್ನೆ; ಕುಮಾರ ಸ್ವಾಮಿ ಸಮರ್ಥನೆ

ಕುಮಟಾ: ರಾಜ್ಯ ರಾಜಕೀಯದಲ್ಲಿ ಈಗ ಹೆಚ್ ಡಿ ಕುಮಾರಸ್ವಾಮಿ ಬ್ರಾಹ್ಮಣರ ಕುರಿತು ನೀಡಿರುವ ಹೇಳಿಕೆ ವಿವಾದದ ಕಿಚ್ಚು ಹತ್ತಿಸಿದೆ. ಕಳೆದ ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ವಾಗ್ದಾಳಿ ನಡೆಸುವಾಗ ಬ್ರಾಹ್ಮ​ಣರ ಕುರಿತು ತಾವು ನೀಡಿದ ಹೇಳಿ​ಕೆ​ಯನ್ನು ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.ಕು​ಮಾ​ರ​ಸ್ವಾಮಿ ಮತ್ತೆ ಸಮ​ರ್ಥಿ​ಸಿ​ಕೊಂಡಿ​ದ್ದಾರೆ. ಈ ಬಗ್ಗೆ ಬ್ರಾಹ್ಮಣ ಸಮುದಾಯದ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ನಾನು ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡಿಲ್ಲ ಎಂದಿದ್ದಾರೆ.

ಈ ಮಧ್ಯೆ ನಿನ್ನೆ ಹೆಚ್ ಡಿ ಕುಮಾರಸ್ವಾಮಿಯವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣಕ್ಕೆ ಭೇಟಿ ನೀಡಿದ್ದರು. ಗೋಕರ್ಣಕ್ಕೆ ಭೇಟಿ ನೀಡಿದ ಹೆಚ್ ಡಿಕೆ ಶಿವನ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು. ಬಳಿಕ ಅಲ್ಲಿನ ಅರ್ಚಕರು ನೇರವಾಗಿ ಕುಮಾರಸ್ವಾಮಿಯವರನ್ನು ಅವರು ಬ್ರಾಹ್ಮಣರ ಬಗ್ಗೆ ನೀಡಿರುವ ಹೇಳಿಕೆ ಇಡೀ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದರು.

ನಾವು ನಿಮ್ಮ ಹಾಗೂ ನಿಮ್ಮ ಕುಟುಂಬದ ಬಗ್ಗೆ ಅಭಿಮಾನ ಹೊಂದಿದ್ದೇವೆ. ಆದರೆ, ನಿಮ್ಮ ಹೇಳಿಕೆಗೆ ಭಾರೀ ಚರ್ಚೆ ನಡೆಯುತ್ತಿದೆಯಲ್ಲ, ನಿಮ್ಮ ಹೇಳಿಕೆ ಬಗ್ಗೆ ನಮಗೆ ಬೇಸರವಾಗಿದೆ ಎಂದರು. ಗೋಕರ್ಣದಲ್ಲಿಯೇ ಇದಕ್ಕೆ ಸ್ಪಷ್ಟೀಕರಣ ನೀಡುವಂತೆ ಅರ್ಚಕರು ತಾಕೀತು ಮಾಡಿದರು. 

ಕುಮಾರಸ್ವಾಮಿಯವರು ಪ್ರತಿ ಊರುಗಳಲ್ಲಿ ಪಂಚರತ್ನ ಯಾತ್ರೆಗೆ ಮುನ್ನ ಅಲ್ಲಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನಾಡಿ ಪೂಜೆ-ಪ್ರಾರ್ಥನೆ ಸಲ್ಲಿಸಿ ಯಾತ್ರೆ ಆರಂಭಿಸುತ್ತಾರೆ. ಅದರಂತೆ ನಿನ್ನೆ ಗೋಕರ್ಣಕ್ಕೆ ಹೋಗಿದ್ದರು. ಈ ವೇಳೆ ಕುಮಾರಸ್ವಾಮಿಯವರಿಗೆ ಈ ಪ್ರಶ್ನೆ ಎದುರಾಗಿದೆ.  

ಈ ವೇಳೆ ಅರ್ಚಕರಿಗೆ ಸ್ಪಷ್ಟೀಕರಣ ನೀಡಲು ಬಯಸಿದ ಕುಮಾರಸ್ವಾಮಿಯವರು, ನಾನೆಂದಿಗೂ ಬ್ರಾಹ್ಮಣ ಸಮಾಜದ ಬಗ್ಗೆ  ಟೀಕೆ ಮಾಡಿಲ್ಲ, ಈ ಸಮಾಜದ ಬಗ್ಗೆ ಗೌರವ ಇಟ್ಟಿದ್ದೇನೆ. ನಾನು ಮಾತ​ನಾ​ಡಿದ್ದು ಬ್ರಾಹ್ಮಣ ಸಮುದಾಯದ ಕುರಿ​ತಲ್ಲ, ವ್ಯಕ್ತಿಗಳ ಬಗ್ಗೆಯಷ್ಟೆ. ರಾವಣನೂ ಬ್ರಾಹ್ಮ​ಣ​. ಆದರೆ ಅವನನ್ನು ನಾವು ರಾಕ್ಷಸ ಅಂತ ಗುರು​ತಿ​ಸು​ತ್ತೇ​ವೆಯೇ ಹೊರತು ಬ್ರಾಹ್ಮಣ ಅಂತ ಅಲ್ಲ ಎಂದರು. 

ನಂತರ ಕುಮಟಾ ಹಾಗೂ ಗೋಕ​ರ್ಣ​ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಶಿವನಿಗೆ ರುದ್ರಾಭಿಷೇಕ ಆರಂಭಿ​ಸಿ​ದ್ದೇ ರಾವಣೇಶ್ವರ. ಇಷ್ಟಾ​ದರೂ ರಾವ​ಣ​ನನ್ನು ರಾಕ್ಷಸ ಎಂದೇ ಗುರು​ತಿ​ಸು​ತ್ತೇ​ವೆಯೇ ಹೊರ​ತು ಬ್ರಾಹ್ಮಣ ಎಂದಲ್ಲ. ಅದೇ ರೀತಿ ನಾನು ಶೃಂಗೇರಿಯ ಚಂದ್ರಮೌಳೇಶ್ವರ ದೇವಸ್ಥಾನ ಧ್ವಂಸ ಮಾಡಿದವರ ಡಿಎನ್‌ಎಗಳ ಬಗ್ಗೆ ಮಾತನಾಡಿದ್ದೇನೆ. ವಿದ್ಯಾರಣ್ಯರು ಕಟ್ಟಿದ ಚಂದ್ರ​ಮೌ​ಳೇ​ಶ್ವರ ದೇಗು​ಲದ ಮೇಲೆ ದಾಳಿ ಮಾಡಿದವರು ಯಾರು? ಶಿವಾಜಿ ಹತ್ಯೆ ಮಾಡಿದವರು ಯಾರು? ಆ ವರ್ಗ(ಪೇ​ಶ್ವೆ​ಗಳು)ದ ಜನರನ್ನು ನೀವು ಬ್ರಾಹ್ಮಣರು ಅಂತ ಕರೆಯು​ತ್ತೀರಾ ಎಂದು ಮರುಪ್ರಶ್ನಿಸಿದರು.

ಬ್ರಾಹ್ಮಣರ ಅಭಿವೃದ್ಧಿಗೆ ಅನುದಾನ: ಬ್ರಾಹ್ಮಣ ಸಮಾಜದ ಬಗ್ಗೆ ನಾನು ಇಂದಿಗೂ ಗೌರವ ಇಟ್ಟುಕೊಂಡಿದ್ದೇನೆ. ನನ್ನ ಹೇಳಿ​ಕೆ​ಯಲ್ಲಿ ಚರ್ಚೆ​ಯಾ​ಗಿ​ರು​ವು​ದು ವ್ಯಕ್ತಿ ಮಾತ್ರ. ಅದನ್ನು ಸಮಾಜಕ್ಕೆ ಅನ್ವಯಿಸುವುದು ತಪ್ಪು. ಬ್ರಾಹ್ಮಣರ ಬಗ್ಗೆ ಮಾತನಾಡಿರುವುದನ್ನು ತಪ್ಪಾಗಿ ಬಿಂಬಿಸುತ್ತಿದ್ದು, ನನ್ನ ಹೇಳಿಕೆ ನಂತರ ಅನೇಕ ಜನ ದೂರವಾಣಿ ಮುಖಾಂತರ ಹೇಳಿಕೆ ಸರಿ ಇದೆ ಎಂದಿದ್ದಾರೆ. ನಾನು ಬ್ರಾಹ್ಮಣರ ಬಗ್ಗೆ ಯಾವುದೇ ರೀತಿಯ ಅವಮಾನಕರ ಮಾತು ಹೇಳಿಲ್ಲ. ನಾನು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ .25 ಕೋಟಿ ಅನುದಾನ ಹಾಗೂ ನಿವೇಶನ ನೀಡಿ​ದ್ದೇನೆ. ಆದರೆ ಬಿಜೆಪಿ ಸರ್ಕಾರ ಎಷ್ಟುಹಣ ಬಿಡುಗಡೆ ಮಾಡಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.

Latest Indian news

Popular Stories