ಚೆನ್ನೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ರಾಜಕೀಯವನ್ನು ಮೀರಿದ ಅಭಿಯಾನವಾಗಿದೆ ಎಂದು ಹಿರಿಯ ನಟ ಹಾಗೂ ಮಕ್ಕಳ್ ನೀಧಿ ಮೈಯಂ(ಎಂಎನ್‌ಎಂ) ಸಂಸ್ಥಾಪಕ ಕಮಲ್ ಹಾಸನ್ ಅವರು ಶುಕ್ರವಾರ ಹೇಳಿದ್ದಾರೆ.
ದೇಶದ “ಕಳೆದುಹೋದ ಗೌರವವನ್ನು” ಮರಳಿ ಪಡೆಯುವುದು ನಮ್ಮ ಕರ್ತವ್ಯ ಎಂದಿರುವ ಕಮಲ್ ಹಾಸನ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನಿಂದ ಪ್ರಾರಂಭವಾದ ರಾಹುಲ್ ಗಾಂಧಿ ಅವರ ಪ್ಯಾನ್-ಇಂಡಿಯಾ ಪಾದಯಾತ್ರೆಯಲ್ಲಿ ಕಳೆದ ತಿಂಗಳು ದೆಹಲಿಯಲ್ಲಿ ಭಾಗವಹಿಸಿದ್ದರು.
“ನಮ್ಮ ದೇಶದ ಕಳೆದುಹೋದ ಗೌರವವನ್ನು ಮರಳಿ ಪಡೆಯುವುದು ನಮ್ಮ ಜವಾಬ್ದಾರಿಯಾಗಿದೆ. ಇದು (ಭಾರತ್ ಜೋಡೋ ಯಾತ್ರೆ) ರಾಜಕೀಯವನ್ನು ಮೀರಿದ ಯಾತ್ರೆಯಾಗಿದೆ” ಎಂದು ನಟ-ರಾಜಕಾರಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜಲ್ಲಿಕಟ್ಟು’ ಕ್ರೀಡೆ ಅನ್ನು ಚೆನ್ನೈನಲ್ಲಿ ನಡೆಸಲು ಬಯಸುವುದಾಗಿ ಹೇಳಿದ ಕಮಲ್ ಹಾಸನ್ ಅವರು, ಅದಕ್ಕೆ ಅನುಮತಿ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ನಗರವಾಸಿಗಳಿಗೂ ಈ ಕ್ರೀಡೆಯ ವೈಭವವನ್ನು ತಲುಪಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದರು.
ಜಲ್ಲಿಕಟ್ಟು ಕ್ರೀಡೆಯು ಸಾಮಾನ್ಯವಾಗಿ ಮಧುರೈನಲ್ಲಿ ಜನವರಿ ಎರಡನೇ ವಾರದಲ್ಲಿ ಸುಗ್ಗಿಯ ಹಬ್ಬವಾದ ಪೊಂಗಲ್ ವೇಳೆ ನಡೆಯುತ್ತದೆ.