ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಭಾನುವಾರ ದ್ವಿಪಕ್ಷೀಯ ಒಪ್ಪಂದಡಿ ತಮ್ಮ ರಾಷ್ಟ್ರಗಳಲ್ಲಿರುವ ಪರಣಾಮ ಸ್ಥಾವರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಂಡಿದ್ದಾರೆ. ಈ ಪದ್ಧತಿ 32 ವರ್ಷಗಳಿಂದ ನಡೆದುಕೊಂಡು ಬಂದಿದೆ.
ಪರಣಾಮ ಸ್ಥಾವರಗಳ ಮೇಲಿನ ದಾಳಿ ನಿಷೇಧ ಒಪ್ಪಂದದ ವಿನಾಯಿತಿಯಡಿ ಈ ವಿನಿಮಯ ಮಾಡಿಕೊಳ್ಳಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ನವದೆಹಲಿ ಮತ್ತು ಇಸ್ಲಾಮಾಬಾದ್ ನಲ್ಲಿ ಏಕಕಾಲದಲ್ಲಿ ರಾಯಭಾರಿಗಳ ಮೂಲಕ ಇದು ನಡೆದಿದೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಪರಮಾಣು ಸ್ಥಾವರಗಳ ವಿರುದ್ಧದ ದಾಳಿ ನಿಷೇಧ ಒಪ್ಪಂದಡಿ ಮಾಹಿತಿ ವಿನಿಮಯ ನಡೆದಿದೆ ಎಂದು ಅದು ತಿಳಿಸಿದೆ. ಮೊದಲ ಬಾರಿಗೆ ಡಿಸೆಂಬರ್ 31, 1988ರಲ್ಲಿ ಈ ಒಪ್ಪಂದವೇರ್ಪಟ್ಟು ಜನವರಿ 27, 1991ರಲ್ಲಿ ಜಾರಿಗೆ ಬಂದಿತು.
ಪ್ರತಿ ವರ್ಷ ಜನವರಿಯಲ್ಲಿ ಭಾರತ- ಪಾಕಿಸ್ತಾನ ಪರಸ್ಪರ ಪರಮಾಣು ಸ್ಥಾವರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.