ಭಿಮಾತಿರದ ವೈಷಮ್ಯಕ್ಕೆ ತೆರೆಯೆಳೆದ ಎಡಿಜಿಪಿ ಅಲೋಕ್ ಕುಮಾರ್

ವರದಿ: ಸಮಿಯುಲ್ಲಾ ಉಸ್ತಾದ

ವಿಜಯಪುರ: ಕಳೆದ ಕೆಲವು ತಿಂಗಳ ಹಿಂದೆ ಭಿಮಾತೀರಕ್ಕೆ ಭೆಟಿ ನೀಡಿದ್ದ ಖಡಕ್ ಪೊಲೀಸ್ ಅಧಿಕಾರಿ ಎಡಿಜಿಪಿ ಆಲೋಕ್ ಕುಮಾರ್ ಭಿಮಾತೀರದ ಗ್ಯಾಂಗ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದರು. ಅಷ್ಟೆ ಅಲ್ಲದೆ ತಮ್ಮ ಅಧಿಕಾರಿ-ಸಿಬ್ಬಂಧಿಗಳಿಗೆ ಭ್ರಷ್ಟಾಚಾರಕ್ಕೆ ಕೈ ಜೋಡಿಸಿದರೆ ಹುಷಾರ್ ಎಂದು ಎಚ್ಚರಿಕೆ ಸಹ ನೀಡಿದ್ದರು. ಅದರಲ್ಲೂ ಭೀಮಾತೀರದ ರಕ್ತಸಿಕ್ತ ಅಧ್ಯಾಯಕ್ಕೆ ಕಾರಣವಾದ ಭೀಮಾತೀರದ ಎರಡು ಕುಂಟುಂಬಗಳ ನಡುವೆ ರಾಜಿಸಂಧಾನಕ್ಕೆ ಯತ್ನಿಸಿದ್ದರು ಮತ್ತೇ ಎರಡು ಕುಟುಂಬಗಳಿಗೆ ಕೊನೆಯ ವಾರ್ನಿಂಗ್ ಕೂಡ ನೀಡಿ ಹೋಗಿದ್ದರು.
ಈಗ ಮತ್ತೆ ಭೀಮಾತೀರದಲ್ಲಿ ಅಲೋಕ್ ಕುಮಾರ್ ಮಿಂಚಿನ ಸಂಚಾರ ನಡೆಸಿದ್ದು ಎರಡೂ ಕುಟುಂಬಗಳು ಸಾರ್ವಜನಿಕರ ಸಾಕ್ಷಿಯಾಗಿ ಪ್ರಮಾಣ ಮಾಡುವ ಮೂಲಕ ಐದು ದಶಕಗಳ ರಕ್ತಸಿಕ್ತ ಅಧ್ಯಾಯಕ್ಕೆ ಫುಲ್ ಸ್ಟಾಪ್ ಹಾಕಿದ್ದಾರೆ.

ಬೈರಗೊಂಡ ಹಾಗೂ ಚಡಚಣ ಕುಟುಂಬಗಳ ನಡುವೆ ರಾಜಿ-ಸಂಧಾನ:
ಕಳೆದ ಅರ್ಧ ಶತಕದಿಂದ ಭೀಮಾತೀರದ ಚಡಚಣ ಭಾಗದ ಬೈರಗೊಂಡ ಹಾಗೂ ಚಡಚಣ ಕುಟುಂಬಗಳ ನಡುವೆ ದ್ವೇಷವಿದೆ. ಇದೆ ದ್ವೇಷದಿಂದ ಎರಡು ಕುಟುಂಬಗಳು ಹತ್ತಾರು ಹೆಣಗಳು ಬಿದ್ದಿವೆ. ಎರಡು ಕುಟುಂಬಗಳು ಗ್ಯಾಂಗ್ ಕಟ್ಟಿಕೊಂಡು ಹೊಡೆದಾಡಿ ಇಡೀ ಭೀಮಾತೀರವನ್ನೆ ರಕ್ತಸಿಕ್ತ ಮಾಡಿದ ಅಪಖ್ಯಾತಿ ಪಡೆದಿದ್ದರು. ಇದನ್ನ ಹೋಗಲಾಡಿಸಬೇಕು, ಭೀಮಾತೀರದಲ್ಲಿ ಮತ್ತೆ ಶಾಂತಿ ಮರುಸ್ಥಾಪನೆಗಾಗಿ ಖಡಕ್ ಪೊಲೀಸ್ ಅಧಿಕಾರಿ ಎಡಿಜಿಪಿ ಅಲೋಕ್ ಕುಮಾರ್ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದರು.

ಕಳೆದ ಕೆಲ ತಿಂಗಳ ಹಿಂದಷ್ಟೆ ಬೈರಗೊಂಡ ಕುಟುಂಬದ ಮಹಾದೇವ ಬೈರಗೊಂಡ ಆಂಡ್ ಗ್ಯಾಂಗ್ ಮತ್ತು ಚಡಚಣ ಕುಟುಂಬಸ್ಥರು ಸಂಬಂಧಿಕರನ್ನ ಚಡಚಣ ಠಾಣೆಗೆ ಕರೆಸಿ ದ್ವೇಷ ಬಿಡುವಂತೆ ಖಡಕ್ ವಾರ್ನ್ ಮಾಡಿದ್ದರು. ಆಗ ವಿಮಲಾಬಾಯಿ ನಾಪತ್ತೆಯಾಗಿದ್ದರಿಂದ ರಾಜಿ ಸಂಧಾನ ಯಶಸ್ವಿಯಾಗಿರಲಿಲ್ಲ. ಇಂದು ಸ್ವತಃ ವಿಮಲಾಬಾಯಿ ಹಾಗೂ ಮಹಾದೇವ ಬೈರಗೊಂಡನನ್ನ ಎದುರು ಬದುರು ಕೂರಿಸಿಕೊಂಡು ರಾಜಿ ಮಾಡಿದ್ದಾರೆ.

ವಾರ್ನಿಂಗ್ ಬಳಿಕ ಕೋರ್ಟಗೆ ಶರಣಾಗಿದ್ದ ವಿಮಲಾಬಾಯಿ:
ವಿಮಲಾಬಾಯಿ ಚಡಚಣ ಭೀಮಾತೀರದ ಮೋಸ್ಟ್ ನಟೋರಿಯಸ್ ಹಂತಕ ಮಲ್ಲಿಕಾಜೀ ಚಡಚಣ ಪತ್ನಿ, ನಕಲಿ ಎನ್ಕೌಂಟರನಲ್ಲಿ ಸತ್ತ ಶಾರ್ಫ್ ಶೂಟರ್ ಆಗಿದ್ದ ಧರ್ಮರಾಜ್ ಚಡಚಣ ಹಾಗೂ ಗಂಗಾಧರ ಸಹೋದರರ ತಾಯಿ ಕೂಡ. ಕಳೆದ ಎರಡು ವರ್ಷಗಳ ಹಿಂದೆ ಮಹಾದೇವ ಬೈರಗೊಂಡನ ಮೇಲೆ ಮಾರಾಮೋಸದ ದಾಳಿ ಬಳಿಕ ವಿಮಲಾಬಾಯಿ ಈ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದಳು. ಪೊಲೀಸರ ಕೈಗೆ ಸಿಗದೆ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿದ್ದಳು. ಕಳೆದ ಬಾರಿ ಎಡಿಜಿಪಿ ಅಲೋಕ್ ಕುಮಾರ್ ಭೀಮಾತೀರಕ್ಕೆ ಭೇಟಿ ಕೊಟ್ಟಾಗ ವಿಮಲಾಬಾಯಿ ಹಾಗೂ 18 ವರ್ಷಗಳಿಂದ ಭೂಗತನಾಗಿರುವ ಆಕೆ ಗಂಡ ಮಲ್ಲಿಕಾಜೀ ಪೊಲೀಸರಿಗೆ ಶರಣಾಗಬೇಕು ಅಂತಾ ವಾರ್ನಿಂಗ್ ಕೊಟ್ಟಿದ್ದರು.

ಬಳಿಕ ವಿಮಲಾಬಾಯಿ ವಿಜಯಪುರ ನ್ಯಾಯಾಲಯಕ್ಕೆ ಹಾಜರಾಗಿ ಜೈಲು ಸೇರಿ ಈಗ ಬೇಲ್ ಮೇಲೆ ವಾಪಾಸ್ಸಾಗಿದ್ದಾಳೆ. ಹೀಗಾಗಿ ಎಡಿಜಿಪಿ ಎರಡು ಕುಟುಂಬಗಳ ನಡೆಸುವ ಸಂಧಾನ ಮಹತ್ವ ಪಡೆದುಕೊಂಡಿತ್ತು, ಇದೀಗ ಅದು ಯಶಸ್ವಿಯಾಗಿದ್ದು, ಸಾರ್ವಜನಿಕರ ಎದುರಿನಲ್ಲಿ ಎರಡೂ ಕುಟುಂಬಗಳು ಒಂದಾಗಿದ್ದು, ಈ ಭಾಗದ ಜನರಲ್ಲಿಯೂ ಸಂತಸ ಉಂಟುಮಾಡಿದೆ

ರಾಜಿ ಸಂಧಾನದಲ್ಲಿ ವಿಮಲಾಬಾಯಿ ಭಾಗಿ:
ಕಳೆದ ವರ್ಷ ನಡೆದ ರಾಜೀ ಸಂಧಾನದಲ್ಲಿ ಚಡಚಣ ಕುಟುಂಬದ ಕೆಲ ದೂರದ ಸಂಬಂಧಿಕಗಳು ಬಿಟ್ಟರೆ ಬೇರ್ಯಾರು ಇರಲಿಲ್ಲ. ಇತ್ತ ಬೈರಗೊಂಡ ಹಾಗೂ ಆತನ ಗ್ಯಾಂಗ್ ಸಂಧಾನದಲ್ಲಿ ಪಾಲ್ಗೊಂಡಿತ್ತಾದ್ರು ಸಂಧಾನ ಯಶಸ್ವಿಯಾಗಿರಲಿಲ್ಲ. ಆದ್ರೆ ಬುದುವಾರ ನಡೆದ ರಾಜೀ ಸಂಧಾನದಲ್ಲಿ ಚಡಚಣ ಕುಟುಂಬದ ವಿಮಲಾಬಾಯಿ ಪಾಲ್ಗೊಂಡಿದ್ದಳು. ಈ ಸಂದರ್ಭದಲ್ಲಿ ಮಾತನಾಡಿದ ವಿಮಲಾಬಾಯಿ, ಮೂರು ಮಕ್ಕಳನ್ನು ಮಹದೇವ ಸಾಹುಕಾರ ಭೈರಗೊಂಡ ಕುತಂತ್ರದಿಂದ ಕಳೆದುಕೊಂಡಿದ್ದೇನೆ. ಅವನ ಮುಖ ನೋಡುವುದಕ್ಕೂ ಇಷ್ಟವಿರಲಿಲ್ಲ. ಆದರೆ ಎಡಿಜಿಪಿ ಅಲೋಕ್ ಕುಮಾರ್ ಸರ್ ಹೇಗೆ ಹೇಳ್ತಾರೆ ಹಾಗೆ ಕೇಳ್ತೀನಿ ಎನ್ನುವ ಮೂಲಕ ರಾಜಿಗೆ ಒಪ್ಪಿಕೊಂಡಿದ್ದಾಳೆ.

ಇನ್ನು ಮಹದೇವ ಸಾಹುಕಾರ ಭೈರಗೊಂಡ ಮಾತನಾಡಿ, ದೇವರ ಹಾಗೂ ಅಧಿಕಾರಿಗಳು, ಸಾರ್ವಜನಿಕರ ಸಾಕ್ಷಿಯಾಗಿ ಇನ್ನು ಮುಂದೆ ಕಾನೂನುಬಾಹಿರ ಚಟುವಟಿಕೆ ನಿಲ್ಲಿಸುತ್ತೇನೆ. ಅವರಿಗೆ ನನ್ನಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮಾತುಕೊಟ್ಟಿದ್ದಾರೆ.

ರಾಜಿ ಸಂಧಾನದ ಬಳಿಕ ಮಾತನಾಡಿದ ಎಡಿಜಿಪಿ ಅಲೋಕ ಕುಮಾರ, ಎರಡೂ ಕುಟುಂಬಗಳು ಈಗ ರಾಜಿ ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ. ಅದರಂತೆ ನಡೆಯಬೇಕು. ಇಲ್ಲದಿದ್ರೆ ನಮ್ಮ ಆಯುಧಗಳಿರುವುದು ಕೇವಲ ಆಯುಧ ಪೂಜೆಗಲ್ಲ ಎನ್ನುವುದನ್ನು ನೆನಪಿಡಬೇಕು ಎಂದು ವಾರ್ನ್ ಮಾಡಿದರು.

ರಾಜೀ-ಸಂಧಾನದ ಬಳಿಕ ಶಾಂತವಾಗುತ್ತಾ ಭೀಮಾತೀರ:
ಭೀಮಾತೀರದ ರಕ್ತಸಿಕ್ತ ಇತಿಹಾಸ ಇಂದು ನಿನ್ನೆಯದಲ್ಲ, ಇಲ್ಲಿ ನಡೆದ ರಕ್ತಪಾತಗಳಿಗೆ ಅರ್ಧ ಶತಮಾನದ ಚರಿತ್ರೆ ಇದೆ. ಹಿಂದೆ ಕ್ಷುಲ್ಲಕ ಕಾರಣಕ್ಕೆ ಭೀಮಾತೀರದ ಅಂಚಿಗಿರುವ ಉಮರಾಣಿ ಗ್ರಾಮದಲ್ಲಿ ಚಡಚಣ ಹಾಗೂ ಬೈರಗೊಂಡ ಕುಟುಂಬದ ನಡುವೆ ತಕರಾರು ಶುರುವಾಗಿ, ಅದು ಆ ಜನ್ಮದ್ವೇಷಕ್ಕೆ ತಿರುಗಿತ್ತು. ಬಳಿಕ ಭೀಮಾತೀರದಲ್ಲಿ ಬಿದ್ದ ಹೆಣಗಳಿಗೆ ಲೆಕ್ಕವಿಲ್ಲ. ಚಡಚಣ ಹಾಗೂ ಬೈರಗೊಂಡ ಎರಡು ಕುಟುಂಬಗಳು ತಮ್ಮ ಉಳಿವಿಗಾಗಿ ಗ್ಯಾಂಗ್ ಕಟ್ಟಿಕೊಂಡವು.

ಬೈರಗೊಂಡ ಕುಟುಂಬದ ಪುತ್ರಪ್ಪ ಸಾಹುಕಾರ್, ಮಹಾದೇವ ಸಾಹುಕಾರ್ , ಮಲ್ಲಿಕಾಜೀಯಿಂದ ಜೀವ ಉಳಿಸಿಕೊಳ್ಳೊದಕ್ಕೆ ಬಂದೂಕುಗಳನ್ನ ಬೆನ್ನಿಗೆ ಕಟ್ಟಿಕೊಂಡು ಓಡಾಡೋಕೆ ಶುರು ಮಾಡಿದ್ರು. ಹೀಗೆ ಎರಡು ಕುಟುಂಬಗಳ ನಡುವೆ ನಡೆದ ಗ್ಯಾಂಗ್ ವಾರ್ ಗಳಲ್ಲಿ ಹತ್ತಾರು ಹೆಣಗಳು ಬಿದ್ದಿವೆ. ಹಂತಕ ಧರ್ಮರಾಜ್ ಹಾಗೂ ಗಂಗಾಧರ ಡಬಲ್ ಮರ್ಡರ್ ಬಳಿಕ ಸೇಡು ತೀರಿಸಿಕೊಳ್ಳಲು ಚಡಚಣ ಗ್ಯಾಂಗ್ ಕಳೆದ ಮೂರು ವರ್ಷಗಳ ಹಿಂದಷ್ಟೆ ಮಹಾದೇವ ಬೈರಗೊಂಡನ ಮೇಲೆ ಹಾಡುಹಗಲೆ ಫೈರಿಂಗ್ ನಡೆಸಿದ್ದರು.

ಇದಾದ ಬಳಿಕ ಎಡಿಜಿಪಿಯಾಗಿ ಅಧಿಕಾರವಹಿಸಿಕೊಂಡ ಅಲೋಕ್ ಕುಮಾರ್ ಭೀಮಾತೀರದ ಈ ಎರಡು ಮನೆತನಗಳ ನಡುವಿನ ದ್ವೇಷಕ್ಕೆ ಬ್ರೇಕ್ ಹಾಕಿ ರಕ್ತಪಾತಕ್ಕೆ ಕೊನೆಹಾಡಲು ನಿರ್ಧರಿಸಿದ್ದರು. ಸಂಧಾನ-ರಾಜಿ ಬಳಿಕ ಭೀಮಾತೀರದಲ್ಲಿ ಶಾಂತಿ ನೆಲೆಸುತ್ತೆ ಎನ್ನುವ ಅಭಿಪ್ರಾಯಗಳಿವೆ.

ರಾಜೀ-ಸಂಧಾನಕ್ಕೆ ಬರದ ಮಲ್ಲಿಕಾರ್ಜುನ ಚಡಚಣ:
ಮಲ್ಲಿಕಾಜೀ ಚಡಚಣ ಭೂಗತನಾಗಿ 18 ವರ್ಷಗಳು ಕಳೆದಿವೆ. ಇಲ್ಲಿಯವರೆಗೆ ಅವನ ಒಂದು ಸಿಂಗಲ್ ಪೋಟೊ ಸಹಿತ ಪೊಲೀಸ್ ಇಲಾಖೆ ಬಳಿ ಇಲ್ಲ. 18 ವರ್ಷಗಳಿಂದ ಭೂಗತ ಜೀವನ ನಡೆಸುತ್ತಿರುವ ಮಲ್ಲಿಕಾಜೀ ಚಡಚಣ ಎಡಿಜಿಪಿ ನಡೆಸುವ ಸಂಧಾನಕ್ಕೆ ಬರ್ತಾನಾ ಅನ್ನೋ ಕುತೂಹಲಗಳಿದ್ದವು. ಆದ್ರೆ ಆತನ ಆರೋಗ್ಯಸ್ಥಿತಿ ಅಷ್ಟೋಂದು ಸರಿಯಾಗಿಲ್ಲ ಎನ್ನುವ ಮಾಹಿತಿಗಳಿದ್ದು, ರಾಜೀ-ಸಂಧಾನದಲ್ಲಿ ಮಲ್ಲಿಕಾಜೀ ಭಾಗವಹಿಸಿಲ್ಲ.

ನನ್ನ ಮೂರು ಮಕ್ಕಳನ್ನು ಕಳೆದುಕೊಂಡಿದ್ದೇನೆ. ಮಹದೇವ ಸಾಹುಕಾರನ ಮುಖ ನೋಡುವುದಕ್ಕೂ ಇಷ್ಟವಿರಲಿಲ್ಲ. ಆದರೆ ಅಲೋಕ್ ಕುಮಾರ್ ಸಾಹೇಬರು ಕರೆದಿದ್ದಾರೆ ಎನ್ನುವ ಕಾರಣಕ್ಕೆ ಬಂದಿದ್ದು, ರಾಜಿಗೆ ಒಪ್ಪಿಕೊಂಡಿದ್ದೇನೆ.
-ವಿಮಲಾಬಾಯಿ, ಮಲ್ಲಿಕಾರ್ಜುನ ಚಡಚಣ ಹೆಂಡತಿ


ದೇವರ ಹಾಗೂ ಊರಿನ ಗುರುಹಿರಿಯರ ಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ. ಇನ್ಮುಂದೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗುವುದಿಲ್ಲ.
-ಮಹದೇವ ಸಾಹುಕಾರ ಭೈರಗೊಂಡ


ಎರಡೂ ಕುಟುಂಬಗಳು ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ. ಅದರ ಪ್ರಕಾರವೇ ನಡೆದುಕೊಳ್ಳಬೇಕು. ಒಂದು ವೇಳೆ ಕಾನೂನುಬಾಹಿರವಾಗಿ ನಡೆದರೆ, ನಮ್ಮ ಆಯುಧ ಇರುವುದು ಕೇವಲ ಆಯುಧ ಪೂಜೆಗಲ್ಲ ಎನ್ನುವುದನ್ನು ಮರೆಯಬಾರದು.
-ಅಲೋಕ ಕುಮಾರ್, ಎಡಿಜಿಪಿ

Latest Indian news

Popular Stories