ದೆಹಲಿ ಜುಲೈ 28: ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ (Bhima Koregaon Elgar Parishad case) ಸಾಮಾಜಿಕ ಕಾರ್ಯಕರ್ತ, ಎಲ್ಗಾರ್ ಪರಿಷತ್ ಸದಸ್ಯರಾದ ವೆರ್ನಾನ್ ಗೊನ್ಸಾಲ್ವಿಸ್ (Vernon Gonsalves) ಮತ್ತು ಅರುಣ್ ಫೆರೇರಾ (Arun Ferreira) ಅವರಿಗೆ ಸುಪ್ರೀಂಕೋರ್ಟ್ (Supreme Court) ಶುಕ್ರುವಾರ ಜಾಮೀನು ನೀಡಿದೆ.
2018ರ ಆಗಸ್ಟ್ನಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಕಟ್ಟುನಿಟ್ಟಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿಯಲ್ಲಿ ಈ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಬಾಂಬೆ ಹೈಕೋರ್ಟ್ ಈ ಹಿಂದೆ ಡಿಸೆಂಬರ್ 2021 ರಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಸುಪ್ರೀಂ ಮೆಟ್ಟಿಲೇರಿದ್ದರು. ಈ ಕಾರ್ಯಕರ್ತರು ಐದು ವರ್ಷಗಳ ಕಾಲ ಬಂಧನದಲ್ಲಿದ್ದರು ಎಂಬ ಅಂಶವನ್ನು ಸುಪ್ರೀಂಕೋರ್ಟ್ ಜಾಮೀನು ನೀಡುವ ವೇಳೆ ಉಲ್ಲೇಖಿಸಿದೆ.
ಆದಾಗ್ಯೂ, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಗೊನ್ಸಾಲ್ವೆಸ್ ಮತ್ತು ಫೆರೇರಾ ಮಹಾರಾಷ್ಟ್ರವನ್ನು ಬಿಟ್ಟು ಹೋಗಬಾರದು. ಅದೇ ವೇಳೆ ತಮ್ಮ ಪಾಸ್ಪೋರ್ಟ್ಗಳನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ.
ಇಬ್ಬರು ಕಾರ್ಯಕರ್ತರು ತಲಾ ಒಂದು ಮೊಬೈಲ್ ಬಳಸಬೇಕು.ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಅವರ ವಿಳಾಸಗಳನ್ನು ತಿಳಿಸುವಂತೆ ಅದು ನಿರ್ದೇಶಿಸಿದೆ. ಆಗಸ್ಟ್ 2022 ರಲ್ಲಿ, ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ, ಭೀಮಾ ಕೋರೆಗಾಂವ್ ಎಲ್ಗಾರ್ ಪರಿಷತ್ ಪ್ರಕರಣದ ಇನ್ನೊಬ್ಬ ಆರೋಪಿ ಡಾ.ಪಿ.ವರವರ ರಾವ್ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು.