“ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡಿದ್ದಕ್ಕೆ ಧನ್ಯವಾದಗಳು” – ‘ThankYouModi’ ಹ್ಯಾಷ್ ಟ್ಯಾಗ್ ಬಳಸಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡುವ ಸಲುವಾಗಿ ರಾಜ್ಯಕ್ಕೆ ಭೇಟಿ ನೀಡಿರುವ ನಡುವಲ್ಲೇ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ‘ThankYouModi’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ.

ಶೇ.40 ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ. ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ ಕೇಳಿದ್ದರು, ಆ ಲೂಟಿಯ ಬಗ್ಗೆ ತನಿಖೆಯೇ ಇಲ್ಲ. ಸಂತೋಷ್ ಪಾಟೀಲ್ ಪತ್ರಕ್ಕೆ ಪ್ರಧಾನಿಯ ಉತ್ತರವಿಲ್ಲ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ1 ಮಾಡಿದ್ದಕ್ಕೆ ಧನ್ಯವಾದಗಳು ಮೋದಿ ಎಂದು ಹೇಳಿದೆ.

ಮೋದಿ ಸರ್ವಶಕ್ತ, ಸರ್ವಾಂತರ್ಯಾಮಿ ಎನ್ನುವ ಬಿಜೆಪಿ ಸರ್ವಶಕ್ತ ಮೋದಿಗೆ ಬೆಲೆ ಏರಿಕೆ ನಿಯಂತ್ರಿಸಲು ಸಾಧ್ಯವಾಗಿಲ್ಲವೇಕೆ ಎಂದರೆ ಪಾಕಿಸ್ತಾನದ ಕಡೆ ಕೈ ತೋರಿಸುತ್ತಾರೆ. ಗ್ಯಾಸ್ ಬೆಲೆಯನ್ನು ರೂ.1000 ದಾಟಿಸಿ, ಪೆಟ್ರೋಲ್ ಬೆಲೆಯನ್ನು ರೂ.100 ದಾಟಿಸಿ, ಜನರ ಬದುಕಿನ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಮೋದಿಗೆ ಧನ್ಯವಾದಗಳು.

ಕರ್ನಾಟಕದಲ್ಲಿ ಭ್ರಷ್ಟಾಚಾರವು ಡಬಲ್ ವೇಗದಲ್ಲಿ ಮುನ್ನುಗ್ಗುತ್ತಿದೆ. ನರೇಂದ್ರ ಮೋದಿ  ಅವರೇ, ಭ್ರಷ್ಟಾಚಾರಕ್ಕೆ ಯಾವುದೇ ತಡೆಯಿಲ್ಲದೆ, ಯಾವುದೇ ಅಂಜಿಕೆ, ಅಳುಕಿಲ್ಲದೆ ಶೇ.40 ಕಮಿಷನ್ ಸರ್ಕಾರ ನಡೆಸಿದ್ದಕ್ಕೆ ತಮಗೆ ಧನ್ಯವಾದಗಳು. “ಮೋದಿ ಹೈ ತೊ ಮುಮ್ಕಿನ್ ಹೈ” ಎನ್ನುವಂತೆ ಇದು ಸಾಧ್ಯವಾಗಿದ್ದು ನಿಮ್ಮಿಂದಲೇ ಅಲ್ಲವೇ ಎಂದು ಟೀಕಿಸಿದೆ.

Latest Indian news

Popular Stories