ಬೆಂಗಳೂರು: ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಬಿಜೆಪಿ ಶಾಸಕ ನೆಹರು ಓಲೆಕಾರ್ ಹಾಗೂ ಅವರ ಇಬ್ಬರು ಪುತ್ರರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
50 ಲಕ್ಷ ರೂ. ಮೊತ್ತದ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಮತ್ತು ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲ ಕಾಮಗಾರಿಯಲ್ಲಿ ಶಾಸಕ ಓಲೆಕಾರ್ ಅವರು ಸ್ವಜನ ಪಕ್ಷಪಾತ ಮಾಡಿ, ಕಾಮಗಾರಿಯನ್ನು ಪುತ್ರರಿಗೇ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಕೇಸ್ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ 91 ಸಿಸಿಹೆಚ್ ಕೋರ್ಟ್, ಶಾಸಕ ನೆಹರು ಓಲೆಕಾರ್, ಇಬ್ಬರು ಪುತ್ರರಾದ ದೇವರಾಜ್ ಓಲೆಕಾರ್ ಹಾಗೂ ಮಂಜುನಾಥ್ ಓಲೆಕಾರ್ ಅವರಿಗೆ ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಶಿಕ್ಷೆ ಪ್ರಕಟಿಸಲಾಗಿದೆ.
ಶಾಸಕ ಹಾಗೂ ಅವರ ಪುತ್ರರಿಗೆ ಎರಡು ವರ್ಷ ಜೈಲು ಶಿಕ್ಷೆ ಜೊತೆಗೆ ಎರಡು ಸಾವಿರ ರೂಪಾಯಿ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ನೀಡಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇ ಅವರಿಗೆ ಜಾಮೀನು ಮಂಜೂರು ಮಾಡಲಾಗುತ್ತದೆ.