ವಿಜಯಪುರ : ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಕೆಲವು ನಿಯಮಗಳಿವೆ, ಭ್ರಷ್ಟಾಚಾರ ಮೇಲ್ನೋಟಕ್ಕೆ ಕಾಣಬೇಕು, ಅಂತಹ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸುವ ಅವಕಾಶವಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗುತ್ತಿಗೆ ಕಾಮಗಾರಿಯಲ್ಲಿ ಶೇ.40 ರಷ್ಟು ಕಮೀಷನ್ ಎಂಬ ಆರೋಪ ಗುತ್ತಿಗೆದಾರರಿಂದ ಕೇಳಿಬಂದಿದೆ, ಈ ಬಗ್ಗೆ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ಏಕೆ ದಾಖಲಿಸಿಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಭ್ರಷ್ಟಾಚಾರ ಕಣ್ಣಿಗೆ ಕಾಣುತ್ತದೆಯೋ ಅಥವಾ ಅಧಿಕಾರಿ ದೊಡ್ಡ ಪ್ರಮಾಣದಲ್ಲಿ ಆಸ್ತಿ ಗಳಿಸಿದ್ದು ಕಂಡು ಬಂದರೆ ಅವುಗಳನ್ನು ಸ್ವಯಂ ದೂರು ದಾಖಲಿಸಿಕೊಳ್ಳಬಹುದು, ಗಮನಕ್ಕೆ ಬಾರದ ಸಂಗತಿಗಳಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಯಾವ ರಾಜಕಾರಣಿ, ದೊಡ್ಡ ಮಟ್ಟದ ಅಧಿಕಾರಿಗಳು ಸಹ ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ದಾಖಲೆ ಸಮೇತ ದೂರು ಕೊಡಿ, ಸಂದರ್ಭ ಬಂದರೆ ದೂರುದಾರರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ರಕ್ಷಣೆಯನ್ನು ಒದಗಿಸಲು ಸಹ ಲೋಕಾಯುಕ್ತ ಬದ್ಧವಾಗಿದೆ ಎಂದರು.
ಡಿವೈಎಸ್‌ಪಿಗೆ ಪೂರಕವಾಗಿ ಇನ್ಸಪೆಕ್ಟರ್ ಹಾಗೂ ಇನ್ನಿತರ ಸಿಬ್ಬಂದಿಗಳ ಅಗತ್ಯತೆ ಇದೆ, ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಭರ್ತಿಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಪರಿಣಾಮಕಾರಿಯಾಗಿ ದೂರು ಹಾಗೂ ತನಿಖೆ ನಡೆಸಲು ಸಂಪೂರ್ಣವಾಗಿ ಸಿಬ್ಬಂದಿಗಳ ಅವಶ್ಯಕತೆ ಇದೆ ಎಂದರು.
ರಾಜ್ಯದಲ್ಲಿ 11 ಚೆಕ್‌ಫೋಸ್ಟ್‌ಗಳ ಮೇಲೆ ಈಗಾಗಲೇ ದಾಳಿ ನಡೆಸಿ ಕೇಸು ದಾಖಲಿಸಿಕೊಳ್ಳಲಾಗಿದೆ, ಮಹಾರಾಷ್ಟ್ರ ಗಡಿಯಿಂದ ಹಿಡಿದು ಕೇರಳವರೆಗೆ, ಆಂಧ್ರಪ್ರದೇಶ ಗಡಿಯಿಂದ ತಮಿಳುನಾಡು ಗಡಿಯವರೆಗೆ 11 ಚೆಕ್ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ನಗದು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಆದಾಯ ಪ್ರಮಾಣಪತ್ರ ಸಲ್ಲಿಕೆ ಮಾಡಿರುವ ಶಾಸಕರ ಬಗ್ಗೆ ರಾಜ್ಯಪಾಲರಿಗೆ ವರದಿ ನೀಡಲಾಗಿದೆ, ಇನ್ನೂ ಕೆಲವು ಹಂತಗಳ ನಂತರ ಆದಾಯ ಪ್ರಮಾಣ ಪತ್ರ ಸಲ್ಲಿಕೆ ಮಾಡದ ಶಾಸಕರ ಹೆಸರುಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು, ಆಗಲೂ ಸಹ ಅವರು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಮಾಡದೇ ಇದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಭ್ರಷ್ಟಾಚಾರ ನಿವಾರಣೆಗೆ ಜನರೇ ಕೈ ಜೋಡಿಸಬೇಕು, ದುಡ್ಡು ತೆಗೆದುಕೊಂಡು ಕೆಲಸ ಬೇಗ ಮಾಡಿಸಿಕೊಳ್ಳುವ ಮನಸ್ಥಿತಿ ಜನರಲ್ಲಿದೆ, ಏಕೆ ದುಡ್ಡು ಕೊಡಬೇಕು, ನಾನು ಧರಣಿ ಮಾಡುವೆ ಎಂದು ಕೇಳುವ ಮನಸ್ಥಿತಿ ಜನರಲ್ಲಿ ಬೆಳೆಯಬೇಕು, ಆಗ ಮಾತ್ರ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು, ಭ್ರಷ್ಟಾಚಾರವನ್ನು ಸಹಿಸದ ಮನಸ್ಥಿತಿ ಜನರಲ್ಲಿ ಬರಬೇಕು ಎಂದು ಆಶಯ ವ್ಯಕ್ತಪಡಿಸಿದರು.