ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ‘ನೈತಿಕ ಪೊಲೀಸ್ ಗಿರಿ’ ಪ್ರಕರಣ ವರದಿಯಾಗಿದ್ದು, ಗುರುವಾರ ಸಂಜೆ ಸುಬ್ರಹ್ಮಣ್ಯದಲ್ಲಿ ಹತ್ತು ಅಪರಿಚಿತ ವ್ಯಕ್ತಿಗಳ ಗುಂಪೊಂದು 20 ವರ್ಷದ ಮುಸ್ಲಿಂ ಯುವಕನನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ.
ಸುಳ್ಯ ತಾಲೂಕಿನ ಕಲ್ಲುಗುಂಡಿ ನಿವಾಸಿ ಅಫೀದ್ ಎಂಬ ಯುವಕ 17 ವರ್ಷದ ಹಿಂದೂ ಯುವತಿಯೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿದ್ದು, ಆಕೆಯನ್ನು ಬಸ್ ನಿಲ್ದಾಣದಲ್ಲಿ ಭೇಟಿ ಮಾಡುತ್ತಿದ್ದ ಎನ್ನಲಾಗಿದೆ.
ಸುಬ್ರಹ್ಮಣ್ಯದ ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಬಾಲಕಿ ಸುಬ್ರಹ್ಮಣ್ಯ ಬಸ್ ನಿಲ್ದಾಣದಲ್ಲಿ ಅಫಿದ್‌ನನ್ನು ಭೇಟಿಯಾಗುತ್ತಿದ್ದಳು ಮತ್ತು ಈ ಹಿಂದೆ ಕೆಲವು ವ್ಯಕ್ತಿಗಳು ಅವರನ್ನು ಗಮನಿಸಿದ್ದರು. ಗುರುವಾರವೂ ಬಾಲಕಿ ಬಸ್ ನಿಲ್ದಾಣಕ್ಕೆ ಆಗಮಿಸಿ ಅಫೀದ್ ಜತೆ ಮಾತನಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಜೀಪಿನಲ್ಲಿ ಬಂದು ಅಫಿದ್ ನನ್ನು ಹಳೆ ಕಟ್ಟಡಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ.
10 ರಿಂದ 12 ಜನ ಅಫೀದ್ ನನ್ನು ವಿವಸ್ತ್ರಗೊಳಿಸಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಹಿಂದೂ ಯುವತಿಯರೊಂದಿಗೆ ಸ್ನೇಹ ಮಾಡ ಬೇಡ ಎಂದು ಬೆದರಿಸಿ ಮೊಬೈಲ್ ಹಾಗೂ ಪರ್ಸ್ ದೋಚಿದ್ದಾರೆ. ದಾಳಿಕೋರರಲ್ಲಿ ಕೆಲವರು ‘ಎಸ್‌ಎಸ್‌ಎಸ್‌ಪಿಯು’ ಎಂಬ ಕಾಲೇಜು ಹೆಸರಿನ ಟೀ ಶರ್ಟ್‌ಗಳನ್ನು ಧರಿಸಿದ್ದರು. ಯುವಕನ ದೂರಿನ ಆಧಾರದ ಮೇಲೆ ಜಿಲ್ಲಾ ಪೊಲೀಸರು ದಾಳಿಕೋರರ ವಿರುದ್ಧ ಕೊಲೆ ಯತ್ನದ ಕೇಸ್ ದಾಖಲಿಸಿದ್ದಾರೆ.
ಇನ್ನು ಅಪ್ರಾಪ್ತ ಬಾಲಕಿಯ ತಂದೆ ಸಹ ಯುಕನ ವಿರುದ್ಧ ದೂರು ನೀಡಿದ್ದು, ಅಫಿದ್ ತನ್ನ ಮಗಳಿಗೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಅಫಿದ್ ವಿರುದ್ಧ ಈಗ ಪೋಕ್ಸೊ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ದಾಳಿಕೋರರನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಮತ್ತು ದಾಳಿಕೋರರು ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನವಾನೆ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.