ಮಂಗಳೂರಿನಿಂದ ಬೆಂಗಳೂರಿಗೆ ಬೇಕಾಗಿದೆ ಬೆಳಗ್ಗೆ ವಿಮಾನ

ಮಂಗಳೂರು: ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಮಧ್ಯಾಹ್ನದ ವರೆಗೆ ಯಾವುದೇ ವಿಮಾನ ಸಂಚಾರ ಇಲ್ಲದಿರುವುದು ಸಮಸ್ಯೆ ಸೃಷ್ಟಿಸಿದೆ.

ಪ್ರಸ್ತುತ ಬೆಂಗಳೂರಿಗೆ ಆರು ವಿಮಾನಗಳ ಸಂಚಾರವಿದೆ. ಆದರೆ ಸಂಚಾರ ಆರಂಭವಾಗುವುದೇ ಪೂರ್ವಾಹ್ನ 11.50ಕ್ಕೆ. ಬಳಿಕ ಮಧ್ಯಾಹ್ನ 1.40, ಸಂಜೆ 6.50, ರಾತ್ರಿ 8.40, 9.30 ಹಾಗೂ ದಿನದ ಕೊನೆಯ ವಿಮಾನ 10.15ಕ್ಕೆ ನಿರ್ಗಮಿಸುತ್ತದೆ. ಬೆಳಗ್ಗಿನ ವೇಳೆಗೆ ಒಂದು ವಿಮಾನ ಸಂಚಾರವಿದ್ದರೆ ಕಚೇರಿ ಹಾಗೂ ವಾಣಿಜ್ಯ ಉದ್ದೇಶಗಳಿಗೆ ತೆರಳುವರಿಗೆ ಹೆಚ್ಚು ಅನುಕೂಲವಾಗುತ್ತದೆ.

ಪ್ರಸ್ತುತ ಬೆಂಗಳೂರಿನಿಂದ ಬೆಳಗ್ಗೆ 7.10ಕ್ಕೆ ವಿಮಾನವೊಂದು ಆಗಮಿಸುತ್ತದೆ. ಬಳಿಕ ಮುಂಬಯಿಗೆ ಪ್ರಯಾಣ ಬೆಳೆಸುತ್ತದೆ. ಮುಂದಿನ ವಿಮಾನ 11.20ಕ್ಕೆ ಆಗಮಿಸಿ 11.50ಕ್ಕೆ ಮರಳಿ ಬೆಂಗಳೂರಿಗೇ ತೆರಳುತ್ತದೆ.

ಬೆಳಗ್ಗೆ 9 ಗಂಟೆಯ ವೇಳೆಗೆ ಮಂಗಳೂರಿನಿಂದ ವಿಮಾನ ಸಂಚಾರವಿದ್ದರೆ 10.30ರೊಳಗೆ ಬೆಂಗಳೂರು ತಲುಪುತ್ತದೆ. ಅಲ್ಲಿಂದ ಕಚೇರಿ, ವಾಣಿಜ್ಯ ಮುಂತಾದ ಕೆಲಸಗಳನ್ನು ಮುಗಿಸಿ ಆದೇ ದಿನ ಸಂಜೆ ಮಂಗಳೂರಿಗೆ ಮರಳಲು ಅನುಕೂಲವಾಗುತ್ತದೆ. ಪ್ರಸ್ತುತ ಬೆಂಗಳೂರಿನಿಂದ ಕೊನೆಯ ವಿಮಾನ ರಾತ್ರಿ 8.30ಕ್ಕೆ ಹೊರಟು 9.30ಕ್ಕೆ ಮಂಗಳೂರಿಗೆ ಆಗಮಿಸುತ್ತದೆ.

ಮಂಗಳೂರಿನಿಂದ ಬೆಂಗಳೂರಿಗೆ ಬೆಳಗ್ಗಿನ ವೇಳೆಗೆ ವಿಮಾನ ಸಂಚಾರ ಆರಂಭಿಸಬೇಕು ಎಂದು ಈಗಾಗಲೇ ಬೇಡಿಕೆ ಸಲ್ಲಿಸಿದ್ದೇವೆ. ಸಂಚಾರ ಆರಂಭಿಸಿದರೆ ಕಚೇರಿ, ವಾಣಿಜ್ಯ ಹಾಗೂ ತುರ್ತು ಕೆಲಸಗಳಿಗೆ ಹೋಗುವ ಕರಾವಳಿ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ.

Latest Indian news

Popular Stories