ಮಂಗಳೂರು, ಜ.18: ಕಳೆದ ವರ್ಷ ನವೆಂಬರ್ 19 ರಂದು ನಗರದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವ ಪುರುಷೋತ್ತಮ ಪೂಜಾರಿ ಅವರಿಗೆ ಖುದ್ದು ಹೊಸ ಆಟೋ ರಿಕ್ಷಾ ನೀಡುವುದಾಗಿ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಮತ್, ನನ್ನ ವೈಯಕ್ತಿಕ ನಿಧಿಯಿಂದ ಪೂಜಾರಿಗೆ ಹೊಸ ಆಟೋ ರಿಕ್ಷಾ ಕೊಡಿಸುತ್ತೇನೆ. ಅವರು ಹೊಂದಿರುವ ಹಳೆಯ ಪರ್ಮಿಟ್ ಆಧರಿಸಿ ಹೊಸ ಆಟೋ ರಿಕ್ಷಾಕ್ಕೆ ಪರ್ಮಿಟ್ ನೀಡುವಂತೆ ಆರ್‌ಟಿಒ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪೂಜಾರಿ ಅವರಿಗೆ ಆಟೋ ರಿಕ್ಷಾ ಹಸ್ತಾಂತರಿಸಿದಾಗ ಬಿಜೆಪಿಯಿಂದ ಐದು ಲಕ್ಷ ರೂಪಾಯಿ ಪರಿಹಾರವನ್ನು 10-12 ದಿನಗಳಲ್ಲಿ ನೀಡಲಾಗುವುದು.
”ಪೂಜಾರಿ ಅವರಿಗೆ ಸರಕಾರ ನೀಡುವ ಪರಿಹಾರದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಕಳುಹಿಸಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಸಚಿವ ಸುನೀಲ್ ಕುಮಾರ್ ಅವರು ಈಗಾಗಲೇ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದು, ಶೀಘ್ರವೇ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದೆ.
“ಕುಕ್ಕರ್ ಬಾಂಬ್ ಸ್ಫೋಟ ಒಂದು ಭಯಾನಕ ಕೃತ್ಯ. ಈ ವೇಳೆ ಅಮಾಯಕ ಪೂಜಾರಿ ಗಾಯಗೊಂಡಿದ್ದಾರೆ. ಆದರೆ ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ಬಾಂಬ್ ಸಿಡಿಸಿದ ವ್ಯಕ್ತಿಯನ್ನು ನಿರಪರಾಧಿ ಎಂದಿರುವ ಕೆಲ ರಾಜಕಾರಣಿಗಳು ಪೂಜಾರಿ ನಿರಪರಾಧಿ ಎಂದು ಹೇಳಿಲ್ಲ.
“ನಮಗೆ ರಾಜಕೀಯಕ್ಕಿಂತ ಪೂಜಾರಿಯವರ ಆರೋಗ್ಯ ಮತ್ತು ಜೀವನೋಪಾಯದ ಸುಧಾರಣೆ ಮುಖ್ಯ. ಹಾಗಾಗಿ ಆತನಿಗೆ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇವೆ. ನಾವು ಅವರ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ.
“ಅವರು ಪ್ರಸ್ತುತ ಕೆಲಸ ಮಾಡಲು ಸಾಧ್ಯವಿಲ್ಲ. ಬಾಡಿಗೆಗೆ ಆಟೋ ಕೊಟ್ಟರೆ ಸ್ವಲ್ಪ ಆದಾಯ ಬರುತ್ತೆ. ಅವರ ಮಗಳ ಮದುವೆಗೂ ಆರ್ಥಿಕ ನೆರವು ನೀಡುತ್ತೇವೆ ಎಂದರು.
ಕಾಮತ್ ಅವರು ಸ್ಥಳಕ್ಕೆ ಎಆರ್ ಟಿಒ ವಿಶ್ವನಾಥ ನಾಯ್ಕ್ ಅವರನ್ನು ಕರೆಸಿ ನೂತನ ಆಟೋ ರಿಕ್ಷಾಕ್ಕೆ ಪರ್ಮಿಟ್ ನೀಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.