ಮಂಗಳೂರು: ದಟ್ಟಾರಣ್ಯದಲ್ಲಿ ದಾರಿ ತಪ್ಪಿ ಕೊನೆಗೂ ಸಿಕ್ಕಿದ ಟ್ರೆಕ್ಕಿಂಗ್ ಹೋದ ಯುವಕ!

ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ಸಂಧಿಸು ಪಶ್ಚಿಮ ಘಟ್ಟದಲ್ಲಿ ಬಂಡಾಜೆ ಫಾಲ್ಸ್ ಗೆ ಟ್ರೆಕ್ಕಿಂಗ್ ಗೆಂದು ಬಂದ ಯುವಕನೋರ್ವ ದಾರಿ ತಪ್ಪಿ ನಾಪತ್ತೆಯಾದ ಘಟನೆ ನಡೆದಿದ್ದು, ಸತತ ಹುಡುಕಾಟದ ಬಳಿಕ ಸಿಕ್ಕಿದ್ದಾನೆ.

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಗುಡ್ಡ, ಬೆಟ್ಟಕ್ಕೆ ಚಾರಣ ಮಾಡಲೆಂದು ಬಂದವರು ಗುಂಪುಗುಂಪಾಗಿ ಬಂದರೂ ಕೆಲವರು ಹೆಚ್ಚು ಅನ್ವೇಷಣೆಗೆಂದು ಹೋದವರು ದಾರಿ ಅರಿಯಲಾರದೆ ನಾಪತ್ತೆಯಾಗುವುದುಂಟು.

ಇಂಥ ಸನ್ನಿವೇಶಗಳಾದಾಗ ಸ್ಥಳೀಯರು ಜೊತೆಗಿದ್ದರೆ ಕೂಡಲೇ ವಾಪಸ್ ಟ್ರ್ಯಾಕ್ ಗೆ ಬರುತ್ತಾರೆ. ಇಲ್ಲವಾದರೆ ಸಮಸ್ಯೆ. ಇಂಥ ಒಂದು ಸನ್ನಿವೇಶ ದಕ್ಷಿಣ ಕನ್ನಡದ ಬೆಳ್ತಂಗಡಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಅರಣ್ಯ ಪ್ರದೇಶದ ನಡುವೆ ಸೋಮವಾರ ರಾತ್ರಿ ನಡೆದಿದ್ದು, ಯುವಕನೋರ್ವ ಅರಣ್ಯ ಪ್ರದೇಶದಲ್ಲಿ ಕಳೆದುಹೋಗಿದ್ದ. ತಪ್ಪಿಸಿಕೊಂಡಾತ ಸತತ ಹತ್ತು ಗಂಟೆ ನಂತರ ಮಂಗಳವಾರ ಬೆಳಗ್ಗೆ ಸಿಕ್ಕಿದ್ದಾನೆ.

ಇದಕ್ಕಾಗಿ ಸ್ಥಳೀಯರು, ಪೊಲೀಸರು, ಅರಣ್ಯ ಇಲಾಖೆಯವರು ಸತತ ಹುಡುಕಾಟ ನಡೆಸಿದ್ದು, ಮೊಬೈಲ್ ಸಿಗ್ನಲ್ ಸಿಗುತ್ತಿದ್ದ ಕಾರಣ ಚಾರಣಕ್ಕೆಂದು ಬಂದಾತ ವಾಪಸ್ ಸಿಗಲು ಸಹಕಾರಿಯಾಯಿತು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ರಾಣಿಝರಿ ಪ್ರದೇಶದ ಮೂಲಕ ಬಂಡಾಜೆ ಫಾಲ್ಸ್ ಕಡೆ ಟ್ರೆಕ್ಕಿಂಗ್ ಗೆ ಬಂದ ಯುವಕನೊಬ್ಬ ದಾರಿ ತಪ್ಪಿ ನಾಪತ್ತೆಯಾದವ.

ಬೆಂಗಳೂರು ಜೆಪಿ ನಗರದ ಪರೋಸ್ ಅಗರ್ವಾಲ್ ಎಂದು ಹೇಳಲಾಗಿರುವ ಯುವಕ ರಾಣಿಝರಿ ಸಮೀಪದವರೆಗೆ ಬೈಕ್ ನಲ್ಲಿ ಬಂದಿದ್ದು ಇಲ್ಲಿಂದ ಬಂಡಾಜೆ ಫಾಲ್ಸ್ ನ ಬದಿಯಿಂದ ಟ್ರೆಕ್ಕಿಂಗ್ ನಡೆಸಲು ಮುಂದಾಗಿದ್ದಾನೆ. ಆದರೆ ಸಂಜೆಯಾಗುತ್ತಿದ್ದಂತೆ ದಾರಿ ತಪ್ಪಿದ್ದು ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿದ್ದಾನೆ. ಆದರೆ ಆತನಿರುವ ಸ್ಥಳ ಪತ್ತೆ ಹಚ್ಚಲು ಕಷ್ಟಕರವಾದ ಪರಿಸ್ಥಿತಿ ಇತ್ತು. ಇಲ್ಲಿನ ಪರಿಸರದಲ್ಲಿ ಕೆಲವೆಡೆ, ಮೊಬೈಲ್ ನೆಟ್ ವರ್ಕ್ ಸಿಗದಿರುವುದು, ಸಂಪೂರ್ಣ ಅರಣ್ಯ ಪ್ರದೇಶವಾದ ಕಾರಣ ಹಾಗೂ ಜಾರುವ ಬಂಡೆಗಳು ಇರುವುದರಿಂದ ಈತ ಇರಬಹುದಾದ ನಿಗದಿತ ಸ್ಥಳ ಹುಡುಕಲು ಹರಸಾಹಸ ನಡೆಸಬೇಕಾಗುತ್ತಿತ್ತು. ಬಾಳೂರು ಪೊಲೀಸರು ಭಂಡಾಜೆ ಫಾಲ್ಸ್ ನ ತಮ್ಮ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದರು. ಬಂಡಾಜೆ ಫಾಲ್ಸ್ ನ ತಳ ಹಾಗೂ ಇತರ ಕೆಲವುಭಾಗಗಳು ದಕ ಜಿಲ್ಲೆ ವ್ಯಾಪ್ತಿಯಲ್ಲಿದ್ದು ಇಲ್ಲಿಂದ ಬೆಳ್ತಂಗಡಿ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಹುಡುಕಾಟ ಮುಂದುವರೆಸಿದರು.

ಈ ಪ್ರದೇಶವು ಸಂಪೂರ್ಣ ಕತ್ತಲ ಪರಿಸರ ಹಾಗೂ ಕಾಡಾನೆ ಸಹಿತ ಇತರ ವನ್ಯಜೀವಿಗಳು ಸಂಚರಿಸುವ ಸ್ಥಳವಾಗಿದ್ದು ಹಲವು ರೀತಿಯ ಅಪಾಯಗಳ ಮಧ್ಯೆ ಹುಡುಕಾಟ ನಡೆಸಲಾಯಿತು. ಆಗಾಗ ಮೊಬೈಲ್ ಕರೆಗೆ ಸಿಕ್ಕ ಯುವಕನಿಗೆ ಪೊಲೀಸರು ಮತ್ತು ಅರಣ್ಯ ಇಲಾಖೆ, ಧೈರ್ಯ ತುಂಬಿದರು. ಕೊನೆಗೂ ದಟ್ಟಾರಣ್ಯದ ನಡುವೆ ಯುವಕ ಸಿಕ್ಕಿದ್ದಾನೆ. ಈತ ಟ್ರೆಕ್ಕಿಂಗ್ ಗೆಂದು ತಲೆಗೆ ಟಾರ್ಚ್ ಕಟ್ಟಿಕೊಂಡು, ಬೇಕಾದ ವಸ್ತುಗಳನ್ನೆಲ್ಲ ತೆಗೆದುಕೊಂಡು ಬಂದಿದ್ದ. ಆದರೆ ಯಾವುದೋ ಒಂದು ಹಂತದಲ್ಲಿ ದಾರಿ ತಪ್ಪಿಸಿಕೊಂಡಿದ್ದಾನೆ. ಮೊಬೈಲ್ ಟವರ್ ಕೆಲವೊಂದು ಭಾಗದಲ್ಲಿ ಸಿಗುತ್ತಿದ್ದುದು ಈತನಿಗೆ ಅಷ್ಟೇ ಅಲ್ಲ, ಹುಡುಕುವವರಿಗೂ ವರದಾನವಾಯಿತು.

Latest Indian news

Popular Stories