ಮಂಡ್ಯ: ನಾಲೆಗೆ ಉರುಳಿ ಬಿದ್ದ ಕಾರು, ನಾಲ್ವರು ಮಹಿಳೆಯರು ಮೃತ್ಯು

ಮಂಡ್ಯ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಾಮನಹಳ್ಳಿ ಬಳಿ ಶನಿವಾರ ಕಾರು ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿ ಬಿದ್ದಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.

ಇಂದು ರಾತ್ರಿ ರಾತ್ರಿ 8.30ರ ಸುಮಾರಿಗೆ ಗಾಮನಹಳ್ಳಿ ಗ್ರಾಮದ ಹೊರವಲಯದ ತುರುಗನೂರು ಶಾಖಾ ನಾಲೆಗೆ ಕಾರು ಉರುಳಿ ಬಿದ್ದಿದ್ದು, ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಕಾರು ಚಾಲಕ ಮನೋಜ್ ಪ್ರಾಣಾಪಯದಿಂದ ಪಾರಾಗಿದ್ದಾರೆ.

ಮೃತ ಮಹಿಳೆಯರನ್ನು ಟಿ.ನರಸೀಪುರ ತಾಲೂಕು ಗೊರವನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬುವರ ಪತ್ನಿ ಮಹದೇವಮ್ಮ, ಸಂಬಂಧಿಕರಾದ ರೇಖಾ, ಸಂಜನಾ, ಮಹದೇವಿ ಎಂದು ಗುರುತಿಸಲಾಗಿದೆ. 

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ನಾಲ್ವರು ಮಹಿಳೆಯರ ಶವವನ್ನು ನಾಲೆ ನೀರಿನಿಂದ ಹೊರ ತೆಗೆದಿದ್ದಾರೆ‌. ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ.

ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories