ಮಂಡ್ಯ, ಅ 25 : ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಮಂಗಳವಾರ ದುರಂತ ಘಟನೆಯೊಂದರಲ್ಲಿ, ಒಂದೇ ಕುಟುಂಬದ ಐವರು ನೀರಿನ ಕಾಲುವೆಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಮೆಹತಾಬ್ (10), ಅನಿಶಾ ಬೇಗಂ (34), ತಸ್ಮಿಯಾ (22), ಅಶ್ರಕ್ (28) ಮತ್ತು ಅಫೀಕಾ (22) ಎಂದು ಗುರುತಿಸಲಾಗಿದೆ. ರಂಜಾನ್ ಹಬ್ಬದ ನಂತರ ರಜೆಗೆಂದು ಬೆಂಗಳೂರಿನಿಂದ ಅಜ್ಜಿ ಮನೆಗೆ ಬಂದಿದ್ದರು.
ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೂರು ಶವಗಳನ್ನು ಕಾಲುವೆಯಿಂದ ಹೊರತೆಗೆದರು. ಉಳಿದ ಎರಡು ಶವಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸರಾಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತರು ದೊಡ್ಡಕೊತ್ತಗೆರೆ ಗ್ರಾಮದ ಬಳಿಯ ವಿಶ್ವೇಶ್ವರಯ್ಯ ನಾಲೆಯಲ್ಲಿ (ವಿಸಿ) ಈಜಲು ಹೋಗಿದ್ದರು. ಮೃತರು ಬೆಂಗಳೂರಿನ ನೀಲಸಂದ್ರದಲ್ಲಿ ವಾಸವಿದ್ದರು.
ಮೃತರು ಸೋಮವಾರ ಅದೇ ಸ್ಥಳಕ್ಕೆ ಬಂದು ಈಜಿದ್ದರು ಎಂದು ಪೊಲೀಸರು ವಿವರಿಸಿದರು. ಆದರೆ, ಮಂಗಳವಾರ ದುರಂತ ಸಂಭವಿಸಿದೆ. ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ತನಿಖೆ ಕೈಗೊಂಡಿದ್ದಾರೆ.